ಕನ್ನಡಪ್ರಭ ವಾರ್ತೆ ಹಲಗೂರು
ರಾಜಕಾರಣಿಗಳು ಸಮಯಕ್ಕೆ ತಕ್ಕ ಹಾಗೆ ರೈತ ಸಂಘದ ಹಸಿರು ಟವಲ್ ಸೇರಿದಂತೆ ವಿವಿಧ ಬಗೆಯ ಬಣ್ಣ ಬಣ್ಣದ ಟವಲ್ ಧರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅತಂಕ ವ್ಯಕ್ತಪಡಿಸಿದರು.ಬ್ಯಾಡರಹಳ್ಳಿಯಲ್ಲಿ ರಾಜ್ಯ ರೈತ ಸಂಘದ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, ಹಸಿರು ಟವಲ್ ಗಳಿಗೆ ಅದರತೆ ಆದ ಮೌಲ್ಯವಿದೆ. ಆದರೆ, ಹಸಿರು ಟವಲ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ ವಿಷಾದಿಸಿದರು.
ಖಾಸಗಿ ಕಂಪನಿಗಳು ರೈತರಿಂದ ಭೂಮಿ ಪಡೆಯುತ್ತವೆ. ಆದರೆ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೇ ವಂಚಿಸುತ್ತಿವೆ. ಚಳವಳಿ ಹಿಮ್ಮಟ್ಟಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಯಾವುದೇ ಸರ್ಕಾರಗಳಾಗಲಿ ಚಳವಳಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ನಮ್ಮನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಕುಳಗಳ ಪರ ಕಾನೂನು ರೂಪಿಸುತ್ತಿವೆ. ಸರ್ಕಾರದ ನೀತಿಗಳು ಹಳ್ಳಿಗಳು ಮತ್ತು ಬಡಜನರನ್ನು ಒಕ್ಕಲೆಬ್ಬಿಸುತ್ತಿವೆ. ಯುವ ಜನರು ಒಂದಾಗಿ ರೈತ ಸಂಘದ ವತಿಯಿಂದ ಏರ್ಪಡಿಸುವ ಶಿಬಿರಗಳಲ್ಲಿ ಭಾಗವಹಿಸಿ ದೇಶಕ್ಕೆ ಅಗತ್ಯವಿರುವ ಮೌಲ್ಯಯುತ ಚಳವಳಿ ಕಟ್ಟೋಣ ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಹಕ್ಕೊತ್ತಾಯಗಳು ಮತ್ತು ಸಾಮಾಜಿಕ ನ್ಯಾಯ ಪಡೆಯಲು ಹೋರಾಟಗಳ ಅಗತ್ಯವಿದೆ. ಹೋರಾಟಗಾರರ ಜೊತೆಗೆ ಯುವ ಸಮೂಹ ರೈತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೇ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚುವ ಜೊತೆಗೆ ಅನ್ಯಾಯದ ವಿರುದ್ದ, ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದರು.
ಬ್ಯಾಡರಹಳ್ಳಿ ಘಟಕದ ರೈತ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸಾದ್ ಮಾತನಾಡಿ, ಹಸಿರು ಟವಲ್ ಅನ್ನು ಬೇಕಾ ಬಿಟ್ಟಿ ಬಳಕೆ ಮಾಡಿ ದುರುಪಯೋಗ ಮಾಡಿಕೊಳ್ಳಬಾರದು. ಶೋಕಿಗಾಗಿ ಹಾಕಬಾರದು. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಾವು ಉಪಯೋಗಿಸಿಕೊಳ್ಳಬೇಕು ಎಂದರು.
ಇದೇ ವೇಳೆ ರೈತ ಸಂಘದ ನೂತನ ಸದಸ್ಯರಿಗೆ ಪ್ರತಿಜ್ಞಾ ಬೋಧನೆ ಮಾಡಲಾಯಿತು. ರೈತ ಮುಖಂಡ ಬೋರಾಪುರ ಶಂಕರೇಗೌಡ, ತಾಲೂಕು ಅಧ್ಯಕ್ಷ ಶಿವರುದ್ರಪ್ಪ, ಹಲಗೂರು ಶ್ರೀನಿವಾಸ್, ಬಾಣಸಮುದ್ರ ದೇವರಾಜು, ದೊಡ್ಡಬೂಹಳ್ಳಿ ನಟರಾಜು, ಹುಸ್ಕೂರು ರಘು, ಸಿದ್ದೇಗೌಡ, ಗ್ರಾಮ ಘಟಕದ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ಮಧು, ಪ್ರಧಾನ ಕಾರ್ಯದರ್ಶಿ ಅರುಣ್, ಖಜಾಂಚಿ ರಮೇಶ್, ಸದಸ್ಯರಾದ ಮಹೇಶ್, ಶೇಖರ್, ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.