ಹೋರಾಟಗಾರರ ಮೇಲಿನ ಲಾಠಿಚಾರ್ಜ್‌ ಖಂಡನೀಯ: ಜಡಿಸಿದ್ದೇಶ್ವರ ಶ್ರೀ

| Published : Dec 14 2024, 12:50 AM IST

ಸಾರಾಂಶ

ದೇವರಹಿಪ್ಪರಗಿ: ವೀರಶೈವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿರುವುದು ಖಂಡನೀಯ ಎಂದು ಪಟ್ಟಣದ ಜಡೆ ಮಠದ ಜಡಿಸಿದ್ದೇಶ್ವರ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ದೇವರಹಿಪ್ಪರಗಿ:

ವೀರಶೈವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿರುವುದು ಖಂಡನೀಯ ಎಂದು ಪಟ್ಟಣದ ಜಡೆ ಮಠದ ಜಡಿಸಿದ್ದೇಶ್ವರ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ನೂರಕ್ಕೂ ಅಧಿಕ ಉಪಪಂಗಡಗಳಿವೆ. ಪಂಚಮಸಾಲಿ ಸಮಾಜದಲ್ಲಿ ಬಹುತೇಕರು ಕೃಷಿ ಕಾರ್ಮಿಕರು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅಂತಹವರಿಗೆ ವಿದ್ಯಾಭ್ಯಾಸ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಬೇಕೆಂಬ ಕಾರಣಕ್ಕಾಗಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಸರ್ಕಾರ ಹೋರಾಟಗಾರರನ್ನು ಕರೆದು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೇ ಹೊರತು ಹೋರಾಟವನ್ನು ಹತ್ತಿಕ್ಕುವುದು, ಶ್ರೀಗಳ ಹಾಗೂ ಹೋರಾಟಗಾರರ ಮೇಲೆ ಪ್ರಕರಣವನ್ನು ದಾಖಲಿಸುವುದು ಉತ್ತಮ ಬೆಳವಣಿಗೆಯಲ್ಲ. ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡದವರಿಗೂ ಕೇಂದ್ರದ ಒಬಿಸಿ ಮೀಸಲಾತಿ ದೊರೆಯಬೇಕೆಂಬ ಕೂಗು ಈ ಹಿಂದಿನಿಂದಲೂ ಇದೆ. ಅದಕ್ಕೂ ರಾಜ್ಯ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.