ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಬೆಂಗಳೂರಿನಲ್ಲಿ ಪ್ರಕಟವಾಗುವ ಪುಸ್ತಕಗಳೂ ಗ್ರಾಮೀಣಮಟ್ಟದಲ್ಲಿ ಸಿಗಬೇಕು ಎನ್ನುವುದು ಪುಸ್ತಕ ಮನೆಯ ಮೂಲೊದ್ದೇಶವಾಗಿದೆ ಎಂದು ಕ್ರಿಯೇಟಿವ್ ಕಾಲೇಜು ಸಂಸ್ಥಾಪಕ ಅಶ್ವಥ್ ಎಸ್.ಎಲ್. ಹೇಳಿದರು.ಅವರು ಕಾರ್ಕಳ ತಾಲೂಕಿನ ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದನ್ನು ಹೆಚ್ಚಿಸುವ ಸಲುವಾಗಿ ಪುಸ್ತಕ ಮನೆಯ ಯೋಜನೆಗಳಲ್ಲೊಂದಾದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಎನ್ನುವ ಯೋಜನೆಯಂತೆ ದಾನಿಗಳ ಸಹಾಯದಿಂದ ಸುಮಾರು 8 ಸಾವಿರ ಪುಸ್ತಕಗಳನ್ನು ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಹಂಚಲಾಗುತ್ತಿದೆ. ಅತಿ ಹಿಂದುಳಿದ ಜೋಯಿಡಾ ಹಾಗೂ ಶಿರಸಿ ಭಾಗದಲ್ಲಿನ ಕಾಡಿನೊಳಗೆ ವಾಸವಾಗಿರುವ ಮಕ್ಕಳಿಗೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಲು ಪ್ರೇರೇಪಿಸಲಾಗುತ್ತಿದೆ ಎಂದರು.ಪುಸ್ತಕಗಳ ಬಿಡುಗಡೆ: ಜುಲೈ 1ರಂದು ಕಾಲೇಜು ಕ್ಯಾಂಪಸ್‌ನಲ್ಲಿ ತಾಲೂಕಿನ ವಿವಿಧ ಲೇಖಕರು ಬರೆದ ಹದಿನೈದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಕ್ಯಾಂಪಸ್ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ( ಜೋಗಿ) ಪುಸ್ತಕ ಅನಾವರಣಗೊಳಿಸಲಿದ್ದಾರೆ. ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾರ್ಕಳ ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸೇರಿದಂತೆ ಕಾಲೇಜು ಸಂಸ್ಥಾಪಕ, ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ., ಅಶ್ವತ್ ಎಸ್.ಎಲ್., ವಿಮಲ್ ರಾಜ್ ಜಿ., ಗಣಪತಿ ಭಟ್ ಕೆ.ಎಸ್. ಉಪಸ್ಥಿರಿರುವರು ಎಂದರು.
ನರೇಂದ್ರ ಪೈಯವರ ಸಾವಿರದೊಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು, ಸುಧಾ ನಾಗೇಶ್ ಅವರ ಹೊಂಬೆಳಕು, ವಾಣಿರಾಜ್ ಅವರ ಸವಿನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರ ಜೀವನಯಾನ, ಅನುಬೆಳ್ಳೆ ಅವರ ನಗುವ ನಯನ ಮಧುರ ಮೌನ, ರಾಮಕೃಷ್ಣ ಹೆಗಡೆಯವರ ಒಲವಧಾರೆ, ಲಕ್ಷ್ಮಣ ಬಜಿಲರ ನಿರ್ವಾಣ, ಅಶ್ವತ್ಥ ಎಸ್.ಎಲ್. ಅವರ ಅರಿವಿನ ದಾರಿ, ರಾಜೇಂದ್ರ ಭಟ್ ಅವರ ರಾಜಪಥ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ, ಲಲಿತಾ ಮುದ್ರಾಡಿಯವರ ಅರ್ಥವಾಗದವರು, ದಿಗಂತ್ ಬಿಂಬೈಲ್ ಅವರ ಕೊಂದ್ ಪಾಪ ತಿಂದ್ ಪರಿಹಾರ, ಡಾ. ರಾಜಶೇಖರ್ ಹಳೆಮನೆ ಅವರ ಒಡಲುಗೊಂಡವರು, ಮಹೇಶ್ ಪುತ್ತೂರು ಬರೆದ ವರ್ಣ ಪುಸ್ತಕಗಳು ಬಿಡುಗಡೆಯಾಗಲಿದೆ.ಸುದ್ದಿಗೋಷ್ಠಿಯಲ್ಲಿ ಕಾಲೇಜು ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಷನ್ ಗೌಡ, ಕಾಲೇಜು ಸಂಸ್ಥಾಪಕ ಗಣನಾಥ ಶೆಟ್ಟಿ, ಉಪನ್ಯಾಸಕ ಹಾಗೂ ಖ್ಯಾತ ಸಾಹಿತಿ ಅನುಬೆಳ್ಳೆ, ಅಮೃತ್ ಶೆಟ್ಟಿ, ಗಣನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.