ಕೇಂದ್ರ ಕಾರ್ಯಕ್ರಮದಡಿ 44 ಗ್ರಾಮ ಅಭಿವೃದ್ಧಿಗೆ ಚಾಲನೆ

| Published : Oct 06 2025, 01:00 AM IST

ಸಾರಾಂಶ

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದಿಂದ ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನಯಡಿ ದಾವಣಗೆರೆ ಜಿಲ್ಲೆಯ 44 ಗ್ರಾಮಗಳು ಅಭಿವೃದ್ಧಿಗೆ ಆಯ್ಕೆಯಾಗಿದ್ದು, ಕ್ರಿಯಾ ಯೋಜನೆ ತಯಾರಿಕೆಗೆ ಸೆ.17ರಿಂದ ಅ.2ರ ವರೆಗೆ ವಿಶೇಷ ಗ್ರಾಮಸಭೆ ನಡೆಸಿ ಕ್ರಿಯಾ ಯೋಜನೆ ತಯಾರಿಕೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದಿಂದ ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನಯಡಿ ದಾವಣಗೆರೆ ಜಿಲ್ಲೆಯ 44 ಗ್ರಾಮಗಳು ಅಭಿವೃದ್ಧಿಗೆ ಆಯ್ಕೆಯಾಗಿದ್ದು, ಕ್ರಿಯಾ ಯೋಜನೆ ತಯಾರಿಕೆಗೆ ಸೆ.17ರಿಂದ ಅ.2ರ ವರೆಗೆ ವಿಶೇಷ ಗ್ರಾಮಸಭೆ ನಡೆಸಿ ಕ್ರಿಯಾ ಯೋಜನೆ ತಯಾರಿಕೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನಯಡಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಆಯ್ಕೆಯಾದ 44 ಗ್ರಾಮಗಳ ಕ್ರಿಯಾ ಯೋಜನೆ ತಯಾರಿಕೆಗೆ ನಗರದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶನದಂತೆ ರಾಜ್ಯದ 14 ಜಿಲ್ಲೆಗಳಿಗೆ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಕೇಂದ್ರ ಯೋಜನೆಯ ಒಂದು ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ. 2047ಕ್ಕೆ ವಿಕಸಿತ ಭಾರತ ದೃಷ್ಟಿ ಇಟ್ಟುಕೊಂಡು ಮುಂದಿನ 5 ವರ್ಷ 2030ರ ವರೆಗೆ ಕ್ರಿಯಾ ಯೋಜನೆಗಳನ್ನು ತಯಾರಿಸಿ ಬುಡಕಟ್ಟು ಸಮುದಾಯಗಳ ಸಬಲೀಕರಣ ಮತ್ತು ಗ್ರಾಮಮಟ್ಟದಲ್ಲಿ ಸ್ಪಂದಿಸುವ ಆಡಳಿತ ವ್ಯವಸ್ಥೆ ಅನುಷ್ಠಾನ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಆದಿ ಕರ್ಮಯೋಗಿ ಅಭಿಯಾನ ರೂಪಿಸಿ ಅನುಷ್ಠಾನಾಧಿಕಾರಿಗಳು ಮತ್ತು ಭಾಗಿದಾರರಿಗೆ ತರಬೇತಿ ನೀಡಲಾಗಿದೆ. ಸರ್ಕಾರದ 17 ಇಲಾಖೆಗಳ ಸಹಯೋಗದಲ್ಲಿ 25 ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಆದಿ ಸೇವಾ ಕೇಂದ್ರಗಳ ಸ್ಥಾಪನೆ:

ದಾವಣಗೆರೆ ಜಿಲ್ಲೆಯ ಗುರುಸಿದ್ದಾಪುರ, ಬಸವನಕೋಟೆ, ಹೊಸಕೆರೆ, ಕೆಚ್ಚೇನಹಳ್ಳಿ, ಕ್ಯಾಸೇನಹಳ್ಳಿ, ಹನುಮಂತಪುರ, ದೇವಿಕೆರೆ, ಪಲ್ಲಾಗಟ್ಟೆ, ಬಿಸ್ತುವಳ್ಳಿ, ಅಣಬೂರ್, ದೊಣ್ಣೆಹಳ್ಳಿ, ತೋರಣಗಟ್ಟೆ ಗ್ರಾಮ ಪಂಚಾಯಿತಿ, ಜಗಳೂರು ತಾಲೂಕು, ಗುಡ್ಡದ ಕೊಮಾರನಹಳ್ಳಿ, ಕೆಂಪನಹಳ್ಳಿ, ಮೆದಿಕೆರೆ, ಕೋಗಲೂರು, ಹಿರೇಮಳಲಿ, ಹೊನ್ನೆಬಾಗಿ, ಗರಗ, ಕಂಚಿಗನಾಳ್, ಗ್ರಾಮ ಪಂಚಾಯಿತಿ, ಚನ್ನಗಿರಿ ತಾಲ್ಲೂಕು ಆಲೂರು, ಅಣಜಿ, ಹೊನ್ನೂರು, ಹೆಬ್ಬಾಳು, ಕುರ್ಕಿ, ಶ್ಯಾಗಲೆ, ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು, ಎಳೆಹೊಳೆ, ಕೊಂಡಜ್ಜಿ, ಗ್ರಾಮ ಪಂಚಾಯಿತಿ, ಹರಿಹರ ತಾಲ್ಲೂಕು, ಯರಗನಹಳ್ಳಿ, ಹಿರೇಗೋಣಿಗೆರೆ, ಗ್ರಾಮ ಪಂಚಾಯಿತಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಗ್ರಾಮಗಳು ಸೇರಿದಂತೆ ಒಟ್ಟು 44 ಗ್ರಾಮಗಳು ಆಯ್ಕೆಯಾಗಿವೆ. ಆಯ್ಕೆಯಾದ ಗ್ರಾಮಗಳಲ್ಲಿ ಆದಿ ಸೇವಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಅನುಮೋದನೆಗೊಂಡ ಕ್ರಿಯಾ ಯೋಜನೆಗಳನ್ನು ಸಂಬಂಧಿಸಿದ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕೇಂದ್ರ ಕಚೇರಿಗೆ ಸಲ್ಲಿಸಲು ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ರವರ ಆದಿ ಪ್ರಸರಣಾ ಪೋರ್ಟಲ್‌ನಲ್ಲಿ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.