ಗಾಯಕರ ಮಧುರ ಕಂಠದಿಂದ ಹೊರಹೊಮ್ಮುವ ಗೀತೆಗಳು ವಿವಿಧ ಪಕ್ಕವಾದ್ಯಗಳ ನಾದದೊಂದಿಗೆ ಬೆರೆತು ಅಪೂರ್ವ ಸಂಗೀತಲೋಕವನ್ನು ಸೃಷ್ಟಿ ಮಾಡುವ ಮೂಲಕ ಸಂಗೀತಪ್ರಿಯರಿಗೆ ಮುದ ನೀಡುತ್ತದೆ. ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಆಗಮಿಸುವ ಪ್ರವಾಸಿಗರ ಮನಸ್ಸು ಮತ್ತು ಹೃದಯಗಳನ್ನು ಉಲ್ಲಾಸಗೊಳಿಸುತ್ತವೆ ಎಂದು ಕುಶಾಲನಗರ ನಿವೃತ್ತ ಪ್ರಾಧ್ಯಾಪಕ ಸಬಲಂ ಭೋಜಣ್ಣ ರೆಡ್ಡಿ ಹೇಳಿದರು.

ಕನ್ನಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಲಾ ನಡಿಗೆ, ಜನರ ಬಳಿಗೆ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮವನ್ನು ಮೃದಂಗ ಬಾರಿಸುವ ಮೂಲಕ ಚಾಲನೆ ನೀಡಿದ ಸಂಗೀತ ವಿದ್ವಾನ್ ಶಂಕರಯ್ಯ ಅವರು ಮಾತನಾಡಿ, ಪ್ರಕೃತಿಯ ಮಧ್ಯದಲ್ಲಿ ಸರಳವಾದ ವ್ಯವಸ್ಥೆಯಲ್ಲಿ ಪಕ್ಕ ವಾದ್ಯಗಳ ಸಂಗಮದಲ್ಲಿ ಸ್ಥಳೀಯ ಕಲಾವಿದರು ಅನಾವರಣಗೊಳಿಸಲಿರುವ ಹಾಡುಗಳು ಬಹುಕಾಲದವರೆಗೆ ಸಂಗೀತಪ್ರಿಯರ ಮನಸ್ಸನ್ನು ಆಕರ್ಷಿಸಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯಕ ಬಿ.ಎಸ್. ಲೋಕೇಶ್ ಸಾಗರ್ ವಹಿಸಿ ಕಾರ್ಯಕ್ರಮದ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್ ಜಾನಕಿಯವರ ಅಗಲಿಕೆಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಈ ಸಂದರ್ಭ ಕುಶಾಲನಗರ ತಾಲೂಕು ಪ್ರಭಾರ ತಹಸಿಲ್ದಾರ್ ಕೃಷ್ಣಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ನಿವೃತ್ತ ಅಧಿಕಾರಿ ಮಣಜೂರು ಮಂಜುನಾಥ್, ಸ್ಥಳೀಯ ಕಲಾವಿದ ಸತೀಶ್, ಶರ್ಮಿಳಾ ರಮೇಶ್, ಲಕ್ಷ್ಮಿ ಹರೀಶ್, ಕೀಬೋರ್ಡ್ ಕಲಾವಿದ ದಿವಾಕರ್, ತಬಲವಾದಕ ರಾಮಚಂದ್ರ, ಅರಣ್ಯ ಇಲಾಖೆಯ ನಾಣಯ್ಯ, ಸಾಯಬಣ್ಣ ತಳವಾರ್, ಇದ್ದರು.