ಗಡಿ ಸಾಂಸ್ಕೃತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ

| Published : Jan 28 2024, 01:15 AM IST

ಸಾರಾಂಶ

ಕರಿಕೆ ಗ್ರಾಮದ ಬೇಕಲ್ ಉಗ್ಗಪ್ಪ ನಗರದ ಎಳ್ಳುಕೊಚ್ಚಿಯಲ್ಲಿ ನಡೆದ ಗಡಿ ಸಾಂಸ್ಕೃತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಆಕರ್ಷಕ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಗಮಂಡಲ- ಕರಿಕೆ ಮಾರ್ಗದ ರಸ್ತೆ ಅಭಿವೃದ್ಧಿಗೆ ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆಯಡಿ 12 ಕೋಟಿ ರು. ಅನುಮೋದನೆ ದೊರೆತ್ತಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.ಗಡಿ ಸಾಂಸ್ಕೃತಿಕೋತ್ಸವ ಆಚರಣೆ ಸಮಿತಿ ಕರಿಕೆ ಗ್ರಾಮ, ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪು, ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರಿಕೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕರಿಕೆ ಗ್ರಾಮದ ಬೇಕಲ್ ಉಗ್ಗಪ್ಪ ನಗರದ ಎಳ್ಳುಕೊಚ್ಚಿಯಲ್ಲಿ ನಡೆದ ಗಡಿ ಸಾಂಸ್ಕೃತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಆಟದ ಮೈದಾನ ಸೇರಿದಂತೆ ಕರಿಕೆ ಗ್ರಾಮದ ವಿವಿಧ ಅಭಿವೃದ್ಧಿ ಯೋಜನೆಗಳ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಪೊನ್ನಣ್ಣ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ನಡೆದಿದ್ದು, ನ್ಯಾಯಾಲಯದಲ್ಲಿ ಬಗೆಹರಿದ ನಂತರ ಕಾಯಂ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.ಸರ್ಕಾರ ಎಲ್ಲರನ್ನು ಒಳಗೊಂಡು ಅಭಿವೃದ್ಧಿಗೆ ಶ್ರಮಿಸಿದೆ. ಎಲ್ಲರ ಸಹಭಾಗಿತ್ವದಿಂದ ಹಲವು ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಬಸ್ ನಿಲ್ದಾಣ ಸೇರಿದಂತೆ ಎಲ್ಲ ಕೋರಿಕೆಗಳನ್ನು ಬಗೆಹರಿಸಲಾಗುವುದು. ಕರಿಕೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. 25 ಕೋಟಿ ರು. ಅನುದಾನದಡಿಯಲ್ಲಿ ಶೇ.50ರಷ್ಟು ರಸ್ತೆ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆ ಎಂದು ಶಾಸಕರು ಹೇಳಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹಾಗೂ ಗಡಿ ಸಾಂಸ್ಕೃತಿಕ ಆಚರಣೆ ಸ್ವಾಗತ ಸಮಿತಿ ಮಹಾಪೋಷಕ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಭಾಷಾ ಏಕೀಕರಣಕ್ಕೆ ಹಲವರು ಹೋರಾಟ ಮಾಡಿದ್ದಾರೆ. ಗಡಿ ಭಾಗದಲ್ಲಿ ಇತರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುವಂತಾಗಬೇಕು ಎಲ್ಲರೂ ಸಹಬಾಳ್ವೆ ಮತ್ತು ಭ್ರಾತೃತ್ವದಿಂದ ಬದುಕಬೇಕು, ಭಾಷಾ ಸೌಹಾರ್ದತೆ ಬೆಳೆಯಬೇಕು. ಗಡಿ ಪ್ರದೇಶದಲ್ಲಿ ಕನ್ನಡೇತರರರಿಗೆ ಕನ್ನಡ ಕಲಿಸುವಂತಾಗಬೇಕು ಎಂದರು.ಗಡಿ ಉತ್ಸವ ಪ್ರಧಾನ ಕಾರ್ಯದರ್ಶಿ ಬೇಕಲ್ ರಾಮನಾಥ್ ಮಾತನಾಡಿ, ಕರಿಕೆ ಭಾಗಮಂಡಲ ರಸ್ತೆ ಅಭಿವೃದ್ಧಿಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಸಮುದಾಯ ಭವನ, ಆಟದ ಮೈದಾನ, ಹಾಗೂ ಅತಿಥಿ ಗೃಹ ನಿರ್ಮಾಣವಾಗಬೇಕು ಎಂದು ಕೋರಿದರು.ಇದೇ ಸಂದರ್ಭ ಗ್ರಾಮದ ಹಿರಿಯರಾದ ಕೋಡಿ ಪೊನ್ನಪ್ಪ ಮಾತನಾಡಿ, ಸರ್ಕಾರಿ ಶಾಲೆ ಜಾಗವನ್ನು ಒತ್ತುವರಿ ಮಾಡಿದ್ದು, ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಸರ್ಕಾರಿ ಶಾಲೆ ಜಾಗ ಒತ್ತುವರಿ ಮಾಡಿದ್ದಲ್ಲಿ ನಿಯಮಾನುಸಾರ ತೆರವುಗೊಳಿಸಲಾಗುವುದು. ಕರಿಕೆ ಗ್ರಾಮ ಅಭಿವೃದ್ಧಿ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರವೋ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬೇಕಲ್ ದೇವರಾಜ್, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸರ್ಕಾರಿ ವಕೀಲರಾದ ಶ್ರೀಧರ ನಾಯರ್ ಇತರರು ಇದ್ದರು.