ಮತದಾನ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ

| Published : Apr 01 2024, 12:50 AM IST

ಸಾರಾಂಶ

ಕಾಗವಾಡ: ಸಂವಿಧಾನದತ್ತವಾಗಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ರಡ್ಡಿ ಹೇಳಿದರು. ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯತಿ ವತಿಯಿಂದ ಮಾ.31 ಹಾಗೂ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಅಂಗವಾಗಿ ಬೈಕ್ ರ್‍ಯಾಲಿ ನಡೆಸಿ ಮತದಾನ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಸಂವಿಧಾನದತ್ತವಾಗಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ರಡ್ಡಿ ಹೇಳಿದರು.

ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯತಿ ವತಿಯಿಂದ ಮಾ.31 ಹಾಗೂ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಅಂಗವಾಗಿ ಬೈಕ್ ರ್‍ಯಾಲಿ ನಡೆಸಿ ಮತದಾನ ಜಾಗೃತಿ ಮೂಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಯಲ್ಲಿ ಮತದಾನ ಪ್ರಕ್ರಿಯೆ ಅಮೂಲ್ಯವಾಗಿದೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಮತದಾನ ಮಾಡುವುದು ನಮ್ಮ ಹಕ್ಕು. ಪ್ರಜಾಪ್ರಭುತ್ವದ ಅತಿ ದೊಡ್ಡ ವ್ಯವಸ್ಥೆ ಸುಗಮವಾಗಿ ನಡೆದುಕೊಂಡು ಹೋಗಬೇಕಾದರೆ ಅರ್ಹ ವಯಸ್ಸಿನ ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ದಿನದಂದು ಬೇರಾವುದೇ ಕಾರ್ಯಕ್ಕಿಂತ ಮಿಗಿಲಾಗಿ ಹಬ್ಬದಂತೆ ಮತದಾನ ಮಾಡಬೇಕು. ಐದು ವರ್ಷಕ್ಕೊಮ್ಮೆ ಭಾರತೀಯ ನಾಗರಿಕರಿಗೆ ಸಿಗುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬಲ್ಲ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಬಲ್ಲದು. ಮತದಾನ ಮಾಡಲು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಮತದಾನದ ವಿಶ್ವಾಸಾರ್ಹತೆ ಹೆಚ್ಚಿಸಲು ಆಯೋಗ ಅನೇಕ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಅಭಿಯಂತರ ವಿ.ಎನ್. ನಾಗನಕೇರಿ ಮಾತನಾಡಿ, ನವಮತದಾರರು ಆತ್ಮಸಾಕ್ಷಿಯಾಗಿ ತಪ್ಪದೆ ಮತ ಚಲಾಯಿಸಬೇಕು. ಮಹಿಳಾ ಮತ್ತು ಅಂಗವಿಕಲರಿಗೆ ಸುಲಭವಾಗಿ ಮತಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿಶತ ನೂರರಷ್ಟು ಕಡ್ಡಾಯ ಮತದಾನವಾಗುವಂತೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಬೈಕ್ ರ್‍ಯಾಲಿಯಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿ ರಮೇಶ ಮಳ್ಳಿ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಪುಠಾಣಿ, ಶಿಬ್ಬಂದಿ ದೀಪಕ ಶಿಂಧೆ, ಬಸವರಾಜ ಹಳ್ಳಿ, ಮಹೇಶ ನಡುವಿನಮನಿ, ಮಹೇಶ ತೆರದಾಳೆ, ಸಂಜಯ ಸನದಿ, ಕಿರಣ ಶಿರಗಾಂವೆ, ಸಂತೋಷ ಕೋಳಿ, ರವೀಂದ್ರ ಗಾಣಿಗೇರ, ಆರೋಗ್ಯ ಇಲಾಖೆ ಶಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಶಾಲೆ ಶಿಕ್ಷಕರು, ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು.