ಸಾರಾಂಶ
ಚನ್ನಪಟ್ಟಣ: ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಲ್ಲಿಂದ ಪೂಜಿಸ್ಪಟ್ಟಿರುವ ಮಂತ್ರಾಕ್ಷತೆಯನ್ನು ಮನೆ-ಮನೆಗೆ ತಲುಪಿಸುವ ಅಭಿಯಾನಕ್ಕೆ ಬುಧವಾರ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಲ್ಲಿ ಚಾಲನೆ ನೀಡಲಾಯಿತು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರ ವ್ಯಾಪ್ತಿಯ ವಾರ್ಡ್‌ಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು. ಬಿಳಿಪಂಚೆ ಮತ್ತು ಅಂಗಿ ಧರಿಸಿದ್ದ ಗ್ರಾಮ ಹಾಗೂ ವಾರ್ಡ್ ಪ್ರತಿನಿಧಿಗಳು ಪವಿತ್ರ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.ಜಿಲ್ಲಾ ಸಂಯೋಜಕ ಸಂದೀಪ್ ಮಾತನಾಡಿ, ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದೆ. ಈ ಹಿನ್ನೆಲ್ಲೆಯಲ್ಲಿ ಅಲ್ಲಿಂದ ಪೂಜಿಸಿ ತಂದಿರುವ ಮಂತ್ರಾಕ್ಷತೆಯನ್ನು ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಎಷ್ಟೊ ಮಂದಿ ಮಹನೀಯರು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದಾರೆ. ನಮ್ಮ ಕಾಲದಲ್ಲಿ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮ ಪುಣ್ಯ ಎಂದರು. ನಿಮಗೆ ನೀಡಲಾದ ಮಂತ್ರಾಕ್ಷತೆಯನ್ನು ಗ್ರಾಮದಲ್ಲಿನ ದೇವಸ್ಥಾನದಲ್ಲಿ ಇಟ್ಟು ಅದಕ್ಕೆ ಪ್ರತಿದಿನ ಪೂಜೆ ಸಲ್ಲಿಸಿ. ಜನವರಿ 1ರಂದು ಮಂತ್ರಾಕ್ಷತೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇಗುಲದ ಅರ್ಚಕರಿಗೆ ಮೊದಲ ಮಂತ್ರಾಕ್ಷತೆ ಕೊಟ್ಟು ಅಲ್ಲಿಂದ ಮನೆ-ಮನೆಗೆ ತಲುಪಿಸುವ ಕೆಲಸ ಮಾಡಿ. ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಟ್ರಸ್ಟ್ ನಮ್ಮ ಮೇಲೆ ನಂಬಿಕೆ ಇಟ್ಟು ಇದನ್ನು ಕಳಿಸಿದ್ದು, ಅದನ್ನು ಉಳಿಸಿಕೊಳ್ಳಬೇಕು. ಗ್ರಾಮ ಹಾಗೂ ನಗರ ಪ್ರದೇಶದ ಎಲ್ಲ ಹಿಂದೂಗಳ ಮನೆಗಳಿಗೂ ಮಂತ್ರಾಕ್ಷತೆಯನ್ನು ತಲುಪಿಸಬೇಕು. ಬೇಡ ಎಂದರೆ ಒತ್ತಡ ಹಾಕಬೇಡಿ. ಮನೆಗೆ ಹೋಗುವ ಮುಂಚೆ ಎಲ್ಲರಿಗೂ ವಿಚಾರ ತಲುಪಿಸಿ. ಅವರು ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನಾ ದಿನ ಮಂತ್ರಾಕ್ಷತೆ ಇರಿಸಿದ್ದ ದೇವಸ್ಥಾನದಲ್ಲಿ 12.20ಕ್ಕೆ ಪೂಜೆ ಸಲ್ಲಿಸಬೇಕು. ಅನುಕೂಲವಿದ್ದ ಕಡೆ ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಬೇಕು. ಸಂಜೆ ದೇವಸ್ಥಾನದಲ್ಲಿ ಮಹಾಮಂಗಳಾರತಿ ಮಾಡಬೇಕು. ಪ್ರತಿಮನೆಯಲ್ಲೂ ಕನಿಷ್ಠ 5 ದೀಪ ಬೆಳಗುವಂತೆ ಮನವಿ ಮಾಡಿ ಎಂದು ತಿಳಿಸಿದರು. ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಬಿಜೆಪಿ ನಗರದ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಆನಂದಸ್ವಾಮಿ, ವಿ.ಬಿ.ಚಂದ್ರು, ಕುಳ್ಳಪ್ಪ ಇತರರು ಉಪಸ್ಥಿತರಿದ್ದರು.
ಪೊಟೋ೨೭ಸಿಪಿಟಿ೧: ಚನ್ನಪಟ್ಟಣದ ಕೋಟೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪವಿತ್ರ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು.