ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದ ಮೇಲೆ ೧೭೭೨ ರೇಪ್ ಕೇಸ್ ದಾಖಲಾಗಿದೆ. ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ಸೇರಿದಂತೆ ೭೦೪೭ ಕೇಸ್ ದೃಢಪಟ್ಟಿದೆ.

ಯಲ್ಲಾಪುರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದು ತೀವ್ರ ಕಳವಳಕಾರಿಯಾದದ್ದು. ಅದರಲ್ಲೂ ಉತ್ತರ ಕನ್ನಡ ಯಲ್ಲಾಪುರ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಹಿತಕರ ಘಟನೆ ಗಮನಿಸಿದರೆ ಪೊಲೀಸ್ ವ್ಯವಸ್ಥೆಯೇ ಇಲ್ಲವೇ ಅಥವಾ ಗೃಹ ಸಚಿವರು ವಿಫಲರಾಗಿದ್ದಾರೆಯೇ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಪ್ರಶ್ನಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಗೃಹ ಸಚಿವರು ಆರ್‌ಎಸ್ಎಸ್ ಮತ್ತು ಬಿಜೆಪಿ ಮೇಲೆ ದಿನ ಬೆಳಗಾದರೆ ಇಲ್ಲಸಲ್ಲದ ಆರೋಪ ಮಾಡುತ್ತ ತಮ್ಮ ಇಲಾಖೆಯ ವೈಫಲ್ಯ ಮುಚ್ಚಿಕೊಳ್ಳುತ್ತಿರುವುದು ತೀರಾ ವಿಪರ್ಯಾಸವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದ ಮೇಲೆ ೧೭೭೨ ರೇಪ್ ಕೇಸ್ ದಾಖಲಾಗಿದೆ. ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ಸೇರಿದಂತೆ ೭೦೪೭ ಕೇಸ್ ದೃಢಪಟ್ಟಿದೆ. ಅಲ್ಲದೇ ಅತ್ಯಂತ ಭಯಾನಕವಾದ ಪೋಕ್ಸೋ ಕೇಸ್ ೧೫,೦೦೦ ದಾಟಿದೆ ಎಂದರೆ ರಾಜ್ಯದ ಪೊಲೀಸ್ ವ್ಯವಸ್ಥೆಯ, ಗೃಹಸಚಿವರ ಬಗ್ಗೆ ಏನು ಹೇಳಬೇಕು ಎನ್ನುವುದು ಅರ್ಥವಾಗುವುದಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡುವಂತೆಯೇ ಇಲ್ಲ ಎಂದರು.

ಕಿರವತ್ತಿಯಲ್ಲಿ ಒಬ್ಬ ೬೫ ವರ್ಷದ ಮುಸ್ಲಿಂ ವ್ಯಕ್ತಿ ೧೬ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ದೌರ್ಜನ್ಯ ಮಾಡಿದ್ದಲ್ಲದೇ ಮುಂಡಗೋಡಿನ ೬೬ ವರ್ಷದ ಜಿಹಾದಿ ಮನಸ್ಥಿತಿಯ ಇಸ್ಮಾಯಿಲ್ ಸಾಬ್ ಹೋಲಗುರ್ ಎಂಬ ರಾಕ್ಷಸ ೧೨ ವರ್ಷದ ಬಾಲಕಿ ಮೇಲೆ ಚಾಕು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬಾಲಕಿಯ ಬದುಕೇ ನಾಶವಾಗಿದೆ. ಆದರೂ ಇಂತಹ ಜಿಹಾದಿಗಳನ್ನು ಸರ್ಕಾರ ಎಲ್ಲಿಟ್ಟಿದೆ, ಅವರ ಮೇಲೆ ಯಾವ ಕ್ರಮ ಕೈಗೊಂಡಿದೆ, ಇದನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ ಎಂದರು.

ಗುರುವಾರ ಮುಂಡಗೋಡಿನಲ್ಲಿ ದೌರ್ಜನ್ಯದ ವಿರುದ್ಧ ಸ್ವಯಂಪ್ರೇರಿತರಾಗಿ ಸರ್ಕಾರದ ಗಮನ ಸೆಳೆಯಲು ಪೊಲೀಸರ ಅಸಹಾಯಕತೆಯ ಕುರಿತು ಬಂದ್ ಆಚರಿಸಲಾಗುತ್ತಿದೆ. ಅದಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದರು.

ಬಿಜೆಪಿ ಹಿರಿಯ ಮುಖಂಡ ಉಮೇಶ ಭಾಗ್ವತ ಮಾತನಾಡಿ, ೩ನೇ ವರ್ಷದ ಬೆಳೆ ವಿಮೆ ರೈತರಿಗೆ ಬಂದಿದೆ, ಬರುತ್ತಿದೆ. ಇದು ನ್ಯಾಯವಾಗಿ ರೈತರಿಗೆ ಸಂಕಷ್ಟದಲ್ಲಿ ಸಿಗುವಂತೆ ಮಾಡಿದ ಪ್ರಧಾನಿ, ಕೃಷಿಮಂತ್ರಿ ಮತ್ತು ಸಂಸದರು ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಹಕಾರಕ್ಕೆ ಅಭಿನಂದಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಗಣೇಶ ಪಾಟಣಕರ, ರವಿ ದೇವಾಡಿಗ, ಸೋಮು ನಾಯ್ಕ, ವಿನೋದ ತಳೇಕರ ಉಪಸ್ಥಿತರಿದ್ದರು.