ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಆರಂಭ: ಮಧು ಜಿ.ಮಾದೇಗೌಡ

| Published : Jan 31 2025, 12:49 AM IST

ಸಾರಾಂಶ

ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡರು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಭಾರತೀ ವಿದ್ಯಾ ಸಂಸ್ಥೆ ತೆರೆದರು. ಅದು ಇಂದು ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಸಂಸ್ಥೆ ಮರಿ ಮಾನಸ ಗಂಗೋತ್ರಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮುಂದಿನ ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಆರಂಭಿಸಲಾಗುವುದು ಎಂದು ಭಾರತೀ ವಿದ್ಯಾ ಸಂಸ್ಥೆ ಚೇರ್‍ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಗರ ಪ್ರದೇಶದಲ್ಲಿ ಇಲ್ಲದ ಕೋರ್ಸ್‌ಗಳು ಭಾರತೀ ವಿದ್ಯಾ ಸಂಸ್ಥೆಯಲ್ಲಿ ಇವೆ. ಜೂನ್ 2025 ಕಾನೂನು ಕಾಲೇಜು ಆರಂಭಿಸುವ ಮೂಲಕ ವಿದ್ಯಾ ಸಂಸ್ಥೆಗೆ ಮತ್ತೊಂದು ಗರಿಮೆ ಹೆಚ್ಚಿಸಲಾಗುತ್ತಿದೆ ಎಂದರು.

ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡರು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಭಾರತೀ ವಿದ್ಯಾ ಸಂಸ್ಥೆ ತೆರೆದರು. ಅದು ಇಂದು ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಸಂಸ್ಥೆ ಮರಿ ಮಾನಸ ಗಂಗೋತ್ರಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ ಎಂದರು.

ಸಂಸ್ಥೆ ಆರಂಭವಾಗಿ 78 ವರ್ಷಗಳು ಉರುಳಿವೆ. ಗುಣಮಟ್ಟದ ಶಿಕ್ಷಣವೇ ನಮ್ಮ ಮೂಲ ಮಂತ್ರವಾಗಿದೆ. ನನ್ನ ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿ ಗೊಳಿಸಲಾಗುತ್ತಿದೆ ಎಂದರು.

ಸಂಸ್ಥೆ ವತಿಯಿಂದ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂಬ ಮಹತ್ವಕಾಂಕ್ಷೆ ಇದ್ದು, ಅದಕ್ಕೆ ಬೇಕಾದ ರೂಪು ರೇಷಗಳ ಸಿದ್ಧತೆ ನಡೆಯುತ್ತಿದೆ. ಇನ್ನೇರಡು ವರ್ಷದಲ್ಲಿ ಕೇಂದ್ರಿಯ (ಸಿಬಿಎಸ್‌ಸಿ) ಪಠ್ಯಕ್ರಮ ಆಧಾರಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸಲು ಸಿದ್ಧತೆ ಕೈಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಅನುದಾನ, ಅನುದಾನ ರಹಿತ ಮತ್ತು ಸರ್ಕಾರಿ ಶಿಕ್ಷಕರು ಮತ್ತು ಉನ್ಯಾಸಕರ ಸಮಸ್ಯೆಗಳನ್ನು ಅರಿತಿದ್ದು ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುತ್ತೇನೆ. ಅಲ್ಲದೆ ನಿಮ್ಮ ಸಂಘ ಸಂಸ್ಥೆಗಳು ಮತ್ತು ಪ್ರಾಂಶುಪಾಲರ ಸಂಘಕ್ಕೆ ನಾನು ಧ್ವನಿಯಾಗಿ ನನ್ನ ಅನುದಾನದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ. ಚಲುವಯ್ಯ ಮಾತನಾಡಿ, ದ್ವಿತೀಯ ಪಿಯುಸಿ ಫಲಿತಾಂಶವನ್ನು ಹೆಚ್ಚಿಸಲು ಅಗತ್ಯ ಕ್ರಮ ವಹಿಸಿ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಿ ಮಕ್ಕಳು ಪರೀಕ್ಷೆಯನ್ನು ಭಯಬಿಟ್ಟು ಸುಲಭವಾಗಿ ಎದುರಿಸಲು ಯಾವ ಕ್ರಮ ಅನುಸರಿಸಲು ಹಲವು ಮಾರ್ಗ ಸೂಚಿಗಳನ್ನು ಅನುಸರಿಸಲು ಕಾರ್ಯಗಾರ ಉಪಯೋಗವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಯು.ಎಸ್. ನಟರಾಜು, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ಚನ್ನಕೃಷ್ಣಯ್ಯ, ಜಿಲ್ಲಾ ಸಂಯೋಜಕರಾದ ಗುರುಲಿಂಗೇಗೌಡ, ಮೆಳ್ಳಹಳ್ಳಿ ಜವರಾಯಿ, ಗಣೇಶ್ ಕುಮಾರ್, ಮಹದೇವಸ್ವಾಮಿ, ಕೆಂಪಯ್ಯ, ಕಲ್ಲಪ್ಪ, ರಾಧ, ಸುಧಾ, ಪ್ರವೀಣ್‌ಕುಮಾರ್, ಮಹೇಶ್ ಚಂದ್ರ ಅವರನ್ನು ಅಭಿನಂಧಿಸಲಾಯಿತು.

ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ, ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ತಮಿಜ್‌ಮಣಿ, ವಿವಿಧ ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ. ಚಂದನ್, ಸಿ.ವಿ. ಮಲ್ಲಿಕಾರ್ಜುನ, ಪಲ್ಲವಿ, ಪುಟ್ಟಸ್ವಾಮಿಗೌಡ ಸೇರಿದಂತೆ ಮತ್ತಿತರಿದ್ದರು.