ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂಮರ ಮಸೀದಿ, ಮದರಸಾ, ಖಬರಸ್ಥಾನ್ ವನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದೆ, ಕಾಯ್ದೆಗಳಿಂದ ಮುಸ್ಲಿಂರನ್ನು ಬೆದರಿಸಲು ಹೊರಟಿದೆ ಆದರೆ ನಾವು ಹೆದರುವುದಿಲ್ಲ ಯಾವುದೇ ಕಾರಣಕ್ಕೂ ಅವರ ಕಾರ್ಯವನ್ನು ಫಲಿಸಲು ಬಿಡುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಗುಡುಗಿದರು.ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಹಮ್ಮಿಕೊಂಡಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ವಕ್ಫ್ ಗೆ ಭೂಮಿ ದಾನ ಮಾಡಲು 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕೆಂದು ಅವೈಜ್ಞಾನಿಕ ನಿಯಮ ರೂಪಿಸಿದ್ದು, ಬೇರೆ ಧರ್ಮದಲ್ಲಿ ಇಲ್ಲದ ನಿಯಮ ರೂಪಿಸಲಾಗಿದೆ. ದೇಶದಲ್ಲಿಯೇ ಹುಟ್ಟಿದ ಮುಸ್ಲಿಮರಿಗೆ, ವಕ್ಫ್ ಕುರಿತು ದಾಖಲೆ ಕೇಳುವ ಪ್ರಧಾನಿ ಮೋದಿ, ಅಮಿತ್ ಶಾ ಗೆ ದಾಖಲೆ ನೀಡುವ ಅಗತ್ಯವಿಲ್ಲ, ನಾವು ನಮ್ಮ ಆಸ್ತಿಯನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇವೆ ಎಂದರು.
ಬಜರಂಗದಳ, ಆರ್‌ಎಸ್‌ಎಸ್ ಕಾರ್ಯಕರ್ತರು, ಬೆಜೆಪಿಯ ಬೆಂಬಲಿಗರು ದಲಿತರ, ಮುಸ್ಲಿಮರ ಮೇಲೆ ಹಲ್ಲೆ, ಅಮಾಯಕರ ಕೊಲೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಮೋದಿ ಅವರು ಈ ಬಗ್ಗೆ ಬಾಯಿ ಬಿಡದೇ ರಾಜಕೀಯ ಬೇಳೆ ಬೇಯಿಸಿಕೊಳುತ್ತಿದೆ.ದೇಶದ 2 ಸಾವಿರ ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ಪಾಕಿಸ್ತಾನವೂ ದಾಳಿ ಮಾಡುತ್ತಿದೆ, ಮೋದಿಯ ಗೆಳೆಯ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಒರಸೆ ಬದಲಿಸಿದ್ದಾರೆ. ಚೀನಾ ಹೆಸರು ಹೇಳಲು ಹೆದರುವ ಮೋದಿ ಕಾಯ್ದೆಗಳ ಮುಖಾಂತರ ನಾಗರೀಕರನ್ನು ಬೆದರಿಸುತ್ತಿದ್ದಾರೆ ಇದಕ್ಕೆಲ್ಲಾ ನಾವುಗಳು ಹೆದರುವುದಿಲ್ಲ ಎಂದರು.
ಸಮಾವೇಶದಲ್ಲಿ ಚಿಂತಕ ಶಿವಸುಂದರ್ ಹಾಗೂ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಿಮಾನಿ ಮಾತನಾಡಿದರು. ಹೈದ್ರಾಬಾದ್ ನ ಮುಹಮ್ಮದ್ ಖಾನ್ ಹಮೀದ್, ಮೌಲಾನಾ ಜಾಫರ್ ಪಾಶ ಸಾಹೇಬ್, ಜಮಾತೆ ಇಸ್ಲಾಂ ಮುಖಂಡರು, ಧಾರ್ಮಿಕ ಗುರುಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.