ಮಹಿಳೆಯರು ಆಸ್ತಿ ಹಕ್ಕು ನೆಪದಲ್ಲಿ ಸುಖಾಸುಮ್ಮನೆ ಅತ್ತೆ, ಮಾವ, ತಂದೆ, ತಾಯಿ, ಗಂಡ ಹೀಗೆ ಹಲವರ ಮೇಲೆ ಪ್ರಕರಣ ಮಾಡುತ್ತಿದ್ದಾರೆ. ಇದರಿಂದ ಸಂಬಂಧಗಳನ್ನು ಕಳೆದುಕೊಳ್ಳುವ ದುರಾಲೋಚನೆ ಹೆಚ್ಚಾಗುತ್ತಿದೆ. ಮಹಿಳೆಯರು ಸಂಬಂಧ ಉಳಿಸಿಕೊಳ್ಳುವ, ನಿಮಗೆ ಅಪಾಯ ಬಂದಾಗ ರಕ್ಷಣೆಗಾಗಿ, ತಪ್ಪಿಸಿಕೊಳ್ಳಲು ಹಕ್ಕು, ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಮಹಿಳೆಯರಿಗೆ ಇರುವ ಕಾನೂನುಗಳು, ಹಕ್ಕುಗಳು ಇತ್ತೀಚೆಗೆ ಸದ್ಬಳಕೆಯಾಗುವುದಕ್ಕಿಂತ ಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಆಸ್ತಿ ಹಕ್ಕು ನೆಪದಲ್ಲಿ ಸುಖಾಸುಮ್ಮನೆ ಅತ್ತೆ, ಮಾವ, ತಂದೆ, ತಾಯಿ, ಗಂಡ ಹೀಗೆ ಹಲವರ ಮೇಲೆ ಪ್ರಕರಣ ಮಾಡುತ್ತಿದ್ದಾರೆ. ಇದರಿಂದ ಸಂಬಂಧಗಳನ್ನು ಕಳೆದುಕೊಳ್ಳುವ ದುರಾಲೋಚನೆ ಹೆಚ್ಚಾಗುತ್ತಿದೆ. ಮಹಿಳೆಯರು ಸಂಬಂಧ ಉಳಿಸಿಕೊಳ್ಳುವ, ನಿಮಗೆ ಅಪಾಯ ಬಂದಾಗ ರಕ್ಷಣೆಗಾಗಿ, ತಪ್ಪಿಸಿಕೊಳ್ಳಲು ಹಕ್ಕು, ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು. ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

ಈ ಹಿಂದೆ ಮಹಿಳಾ ದಿನಾಚರಣೆಗಳು ಮಹಿಳೆಯರಿಗೆ ಎಲ್ಲಾ ಸ್ತರಗಳಲ್ಲೂ ಆಗುತ್ತಿದ್ದ ಶೋಷಣೆ ತಪ್ಪಿಸಲು, ಮಹಿಳಾ ಸಬಲೀಕರಣಕ್ಕೆ ಮಾಡಲಾಗುತ್ತಿತ್ತು. ಮಹಿಳೆಯರ ಹಕ್ಕು, ಜವಾಬ್ದಾರಿ, ನಗಿರುವ ಶಕ್ತಿ, ತನ್ನಲ್ಲಿರುವ ಸಬಲೀಕರಣದ ಅರಿವು ಮೂಡಿಸುವುದಾಗಿತ್ತು. ಆದರೆ, ಇಂದು ಕೇವಲ ಸಂಭ್ರಮಾಚರಣೆ ಮಾತ್ರ ಸೀಮಿತವಾಗಿವೆ. ಮಹಿಳಾ ದಿನಾಚರಣೆಗಳು ಮಹತ್ವ ಈ ಹಿಂದೆ ಎಷ್ಟಿತ್ತು. ಈಗ ಅದು ಕಳೆದುಕೊಳ್ಳುತ್ತಿದೆ. ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು.

21ನೇ ಶತಮಾನಕ್ಕೆ ಬಂದಿದ್ದರೂ ಇಂದು ಮಹಿಳೆಯ ಮೇಲಿನ ಶೋಷಣೆ ತಪ್ಪಿಲ್ಲ. ಆ ವಿಚಾರದಲ್ಲಿ ಎಡಗುತ್ತಿದ್ದೇವೆ. ಮನೆ ಮನೆಗೆ ಘಂಟಾಘೋಷ ಹಕ್ಕುಗಳು, ಕಾನೂನು ಅರಿವು ತಲುಪುತ್ತಿದೆಯೇ ಎಂಬುದನ್ನು ಪ್ರಶ್ನೆ ಮಾಡಬೇಕು. ಬೆಳೆದವರು ಬೆಳೆಯುತ್ತಿದ್ದಾರೆ. ಶೋಷಣೆಗೆ ಒಳಗಾಗುವವರು ಆಗುತ್ತಿದ್ದಾರೆ. ಇಂದು ಮಹಿಳೆ ಸಮಾಜದಲ್ಲಿ ಸುಭದ್ರವಾಗಿದ್ದಾರೆ ಎಂದರೆ ಅದರ ಹಿಂದೆ ತುಂಬ ಜನರ ಶ್ರಮವಿದೆ. ಮಹಿಳೆಯರಿಗೆ ಹಕ್ಕು ಕೊಟ್ಟವರ ಶ್ರಮ ಅಪಾರವಾಗಿದೆ. ಮುಂದಿನ ಪೀಳಿಗೆಗೆ ಇದು ಸದ್ಬಳಕೆಯಾಗಬೇಕು. ತಳಮಟ್ಟದ ವ್ಯಕ್ತಿಗಳಿಗೂ ತಲುಪಬೇಕು ಎಂದರು.

ಮಹಿಳಾ ದಿನಾಚರಣೆ ಎಂದು ಪುರುಷ ದ್ವೇಷಿಯಲ್ಲ. ನಿಮ್ಮ ಸಾಧನೆ ಹಿಂದೆ ಒಬ್ಬ ಪುರುಷ ಇದ್ದೆ ಇರುತ್ತಾನೆ. ಅವರು ತಮ್ಮ, ಅಣ್ಣ, ಗಂಡ, ತಂದೆ ಹೀಗೆ ಹಲವು ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಮಹಿಳೆ ಮೇಲೆ ದೌರ್ಜನ್ಯ, ಶೋಷಣೆ ಕೇವಲ ಪುರುಷರಿಂದ ಆಗುತ್ತಿಲ್ಲ, ಮಹಿಳೆಯರಿಂದಲೂ ಆಗುತ್ತಿದೆ. ಇದರಿಂದ ಹೇಗೆ ಹೊರಬರಬೇಕು ಎಂಬ ಬಗ್ಗೆ ಚಿಂತಿಸಬೇಕು. ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಮೂಡಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಸಮಾನತೆ ಕೇವಲ ಅಂಕಿ ಅಂಶಕ್ಕೆ ಸೀಮಿತವಾಗದೇ ನಡೆ, ನುಡಿಗಳಲ್ಲಿ, ಸಾಧನೆಗಳಲ್ಲಿ ಕಾಣಬೇಕು. ಮೌಲ್ಯಯುತ ಜೀವನಕ್ಕಾಗಿ ಶಿಕ್ಷಣ ಅಗತ್ಯ. ಶಿಕ್ಷಿತರಾದಷ್ಟು ಸಮಾಜದ ಸುಧಾರಣೆ ಸಾಧ್ಯವಾಗಲಿದೆ. ಕೇವಲ ಮಾರ್ಕ್ ಕಾರ್ಡ್ ಗಾಗಿ ಓದಿದರೆ ಅದು ಪ್ರಯೋಜನವಿಲ್ಲ. ಪುಸ್ತಕದಲ್ಲಿರುವ ವಿಷಯಗಳ ಪಾಠದ ಸಮಾಜದ ಆಗು ಹೋಗುಗಳ ಬಗ್ಗೆ ತಿಳಿದು ಮುನ್ನಡೆಯಬೇಕು. ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಬೇಕು. ಇದರಿಂದ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

1ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಮಾತನಾಡಿ, ಶ್ರಮ ಪಟ್ಟರೆ ಸಾಧನೆ ಸಾಧ್ಯ. ಈ ಬಗ್ಗೆ ಹೆಣ್ಣು ಮಕ್ಕಳು ಚಿಂತನೆ ಮಾಡಬೇಕು. ನಾವು ಬೇರೆ ಬೇರೆ ಜಿಲ್ಲೆಯವರಾದರೂ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಮಕ್ಕಳು ಗುರಿ ಇಟ್ಟು ಏನೆಲ್ಲಾ ಸಾಧನೆ ಮಾಡಬೇಕು ಅದನ್ನು ಮನಸ್ಸಿನಲ್ಲಿ ಚಿಂತಿಸಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ ಎಂ.ಗುಳ್ಳಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ಉಚಿತ ಕಾನೂನು ಸಲಹೆಗಾರರಾದ ವಕೀಲೆ ಮಂಜುಳಾ ಅಂತರಾಷ್ಟ್ರೀಯ ಮಹಿಳಾ ದಿನ ಕುರಿತು ಸಂಪನ್ಮೂಲ ಭಾಷಣ ಮಾಡಿದರು. ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಂ.ಎನ್.ಗೋಪಿ, ನಿಲಯಪಾಲಕರಾದ ಎಂ.ಇ.ಹೇಮಾವತಿ, ವಿ.ಅರ್ಚನ ಭಾಗವಹಿಸಿದ್ದರು.