ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ಕಾನೂನುಗಳೇ ಅಸ್ತ್ರ: ರಹಮತ್‌ವುಲ್ಲಾ

| Published : Mar 18 2024, 01:45 AM IST

ಸಾರಾಂಶ

ಮಹಿಳೆ ತನ್ನ ಮೇಲಿನ ದೌರ್ಜನ್ಯ ನಿಯಂತ್ರಿಸಲು ಕಾನೂನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಹಿಳೆ ತನ್ನ ಮೇಲಿನ ದೌರ್ಜನ್ಯ ನಿಯಂತ್ರಿಸಲು ಕಾನೂನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಗಾನಯೋಗಿ ಸಂಗೀತ ಬಳಗದ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹದಿನೆಂಟನೇ ಶತಮಾನದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿರಲಿಲ್ಲ. ಸತಿಸಹಗಮನ ಪದ್ಧತಿಯಿತ್ತು. ರಾಜಾರಾಮ್ ಮೋಹನ್‍ರಾಯ್ ಈ ಪದ್ಧತಿಯನ್ನು ವಿರೋಧಿಸಿದರು. 2005ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ಜಾರಿಯಾಯಿತು. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಡಲಾಗಿದೆ. ಸಂವಿಧಾನದಡಿ ಅನೇಕ ಹಕ್ಕುಗಳಿವೆ ಎನ್ನುವುದರ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಶಫೀವುಲ್ಲಾ ಮಾತನಾಡಿ, ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿಶೇಷ ವ್ಯಕ್ತಿಯನ್ನು ಪರಿಚಯಿಸಿಕೊಂಡು ಬರುತ್ತಿದ್ದೇವೆ. ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿ ಸುವುದು ನಮ್ಮ ಉದ್ದೇಶ. ಅದರಂತೆ ಈ ಸಾರಿ ನಿವೃತ್ತ ಮುಖ್ಯ ಶಿಕ್ಷಕಿ ಮಂಜುಳ ಎಸ್. ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಆಹ್ವಾನಿಸಿ ಸನ್ಮಾನಿಸುತ್ತಿದ್ದೇವೆಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾಪುತ್ತೂರ್ಕರ್ ,ವೇದಿಕೆಯ ಗೌರವ ಸಲಹೆಗಾರ ಕೊರ್ಲಕುಂಟೆ ತಿಪ್ಪೇಸ್ವಾಮಿ, ಶಿಕ್ಷಕಿ ಡಾ.ಶಬ್ರಿನಾ ಮಹಮದ್ ಅಲಿ, ಗಾನಯೋಗಿ ಸಂಗೀತ ಬಳಗದ ಉಪ ಸಮಿತಿ ಅಧ್ಯಕ್ಷೆ ಸುಮಾ ರಾಜಶೇಖರ್, ಶಾಂತಮ್ಮ ಕೆ.ಟಿ. ಸೌಮ್ಯ ಪುತ್ರನ್ ವೇದಿಕೆಯಲ್ಲಿದ್ದರು.