ಶುಕ್ರವಾರ ಬೆಳಗ್ಗೆ ಪಟ್ಟಣದ ನ್ಯಾಯಾಲಯದಲ್ಲಿ ಭೂ ವಿವಾದದ ಪ್ರಕರಣವೊಂದರಲ್ಲಿ ನ್ಯಾಯಾಧೀಶರ ಎದುರು ತಮ್ಮ ವಾದ ಮಂಡಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು

ಕುಷ್ಟಗಿ: ಇಲ್ಲಿಯ ಸೀನಿಯರ್‌ ಸಿವಿಲ್‌ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡು ಪ್ರಕರಣವೊಂದರಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಾಡುತ್ತಿರುವಾಗಲೇ ವಕೀಲರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತರಾದ ದಾರುಣ ಘಟನೆ ಶುಕ್ರವಾರ ಕುಷ್ಟಗಿ ನ್ಯಾಯಾಲಯದಲ್ಲಿ ನಡೆದಿದೆ.

ಕುಷ್ಟಗಿ ತಾಲೂಕಿನ ತಾವರಗೇರಾದ ಬಸವಣ್ಣ ಕ್ಯಾಂಪಿನ ನಿಂಗಪ್ಪ ಸುದ್ದಿ (50) ಎಂಬವರೇ ಮೃತರಾದ ದುರ್ದೈವಿ.

ಶುಕ್ರವಾರ ಬೆಳಗ್ಗೆ ಪಟ್ಟಣದ ನ್ಯಾಯಾಲಯದಲ್ಲಿ ಭೂ ವಿವಾದದ ಪ್ರಕರಣವೊಂದರಲ್ಲಿ ನ್ಯಾಯಾಧೀಶರ ಎದುರು ತಮ್ಮ ವಾದ ಮಂಡಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು. ತಕ್ಷಣ ಅವರನ್ನು ವಕೀಲರು ಪಟ್ಟಣದ ಆಸ್ಪತ್ರೆಗೆ ಸೇರಿಸಿದರಾದರೂ ಹೃದಯಾಘಾತದಿಂದ ನಿಂಗಪ್ಪ ಸುದ್ದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಮೃತ ವಕೀಲ ನಿಂಗಪ್ಪ ಸುದ್ದಿಗೆ ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.

ನಿಂಗಪ್ಪ ಕಳೆದ 20 ವರ್ಷಗಳಿಂದ ಗಂಗಾವತಿ, ಕುಷ್ಟಗಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಜತೆಗೆ ರಂಗಭೂಮಿ ಬಗ್ಗೆ ಅಪಾರ ಪ್ರೇಮವಿದ್ದ ಅವರು ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಮೃತ ವಕೀಲರು ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ತಮ್ಮ ಕಕ್ಷಿದಾರರ ಪರ ಪ್ರಕರಣ ನಡೆಸುತ್ತಿದ್ದರು. ಶುಕ್ರವಾರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ನಿಂಗಪ್ಪ ಸುದ್ದಿ ನಿಧನಕ್ಕೆ ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳ ವಕೀಲರ ಸಂಘದವರು ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.