ರಸ್ತೆ ಅಗಲೀಕರಣ ವಿಷಯದಲ್ಲಿ ಅಧಿಕಾರಿಗಳಿಂದ ಗೊಂದಲ: ನ್ಯಾಯವಾದಿ ಸಿದ್ದಲಿಂಗಪ್ಪ ಶೆಟ್ಟರ ಆರೋಪ

| Published : Jul 11 2025, 11:48 PM IST

ರಸ್ತೆ ಅಗಲೀಕರಣ ವಿಷಯದಲ್ಲಿ ಅಧಿಕಾರಿಗಳಿಂದ ಗೊಂದಲ: ನ್ಯಾಯವಾದಿ ಸಿದ್ದಲಿಂಗಪ್ಪ ಶೆಟ್ಟರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರ ಬೇಡಿಕೆಯಂತೆ ಈಗಾಗಲೇ 33 ಅಡಿಗೆ ಒಪ್ಪಿಕೊಂಡಿದ್ದಾಗಿದೆ. 18 ಅಡಿಗಳಷ್ಟು ಸೆಟ್ ಬ್ಯಾಕ್ ವಿಚಾರ ನುಂಗಲಾರದ ಬಿಸಿತುಪ್ಪವಾಗಿದೆ.

ಬ್ಯಾಡಗಿ: ಹೈಕೋರ್ಟನಲ್ಲಿರುವ ದಾವೆಯನ್ನು ಹಿಂಪಡೆಯುವ ಮೂಲಕ ಮುಖ್ಯರಸ್ತೆಯಲ್ಲಿನ ಬಹುತೇಕರು 33 ಅಡಿ ಅಗಲೀಕರಣಕ್ಕೆ ಲಿಖಿತವಾಗಿ ಸಮ್ಮತಿ ಸೂಚಿಸಿದ್ದೇವೆ. ಆದರೆ ಇದೀಗ ಅಧಿಕಾರಿಗಳು 6 ಮೀ.(18 ಅಡಿ)ಗಳಷ್ಟು ಸೆಟ್‌ಬ್ಯಾಕ್ ಬಿಡಬೇಕೆನ್ನುವ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ನಮ್ಮಲ್ಲಿಯೇ ಗೊಂದಲ ಸೃಷ್ಟಿಸುತ್ತಿರುವುದಾಗಿ ಮುಖ್ಯರಸ್ತೆಯಲ್ಲಿನ ಅಂಗಡಿ ಮಾಲೀಕ, ನ್ಯಾಯವಾದಿ ಸಿದ್ದಲಿಂಗಪ್ಪ ಶೆಟ್ಟರ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗಲೀಕರಣ ಹೋರಾಟ ಸಮಿತಿಯ ಸದಸ್ಯರು ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳೊಂದಿಗೆ ಕಳೆದ ತಿಂಗಳು ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು, ಮಾಜಿ ಶಾಸಕರು ಅಗಲೀಕರಣ ಪರ ಹೋರಾಟಗಾರರು ಸೇರಿದಂತೆ ಪಟ್ಟಣದ ಸಾರ್ವಜನಿಕರ ಬೇಡಿಕೆಯಂತೆ ಹೈಕೋರ್ಟನಲ್ಲಿರುವ ದಾವೆಯನ್ನು 72 ಜನರು ಹಿಂಪಡೆದಿದ್ದೇವೆ. ಆದರೆ ಅಧಿಕಾರಿಗಳು ಇದೀಗ ಸೆಟ್ ಬ್ಯಾಕ್ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹೊಸದೊಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.

ಮುಖ್ಯರಸ್ತೆ ಉಳಿಸಿಕೊಡಿ: ವರ್ತಕ ಸುರೇಶ ಮೇಲಗಿರಿ ಮಾತನಾಡಿ, ಎಲ್ಲರ ಬೇಡಿಕೆಯಂತೆ ಈಗಾಗಲೇ 33 ಅಡಿಗೆ ಒಪ್ಪಿಕೊಂಡಿದ್ದಾಗಿದೆ. 18 ಅಡಿಗಳಷ್ಟು ಸೆಟ್ ಬ್ಯಾಕ್ ವಿಚಾರ ನಮಗೀಗ ನುಂಗಲಾರದ ಬಿಸಿತುಪ್ಪವಾಗಿದೆ. ಈ ಕಾನೂನು ಇಲ್ಲಿ ಜಾರಿಯಾದರೇ ಮುಖ್ಯರಸ್ತೆಯಲ್ಲಿ ಯಾವುದೇ ಅಂಗಡಿಗಳು ಉಳಿಯಲು ಸಾಧ್ಯವಿಲ್ಲ. ನಮ್ಮೆಲ್ಲರ ವ್ಯಾಪಾರವನ್ನೇ ನುಂಗಿ ರಾಜ್ಯ ಹೆದ್ದಾರಿಯನ್ನಷ್ಟೇ ಮಾಡುವ ಹುನ್ನಾರ ಇದರಲ್ಲಡಗಿದೆ ಎಂದು ಆರೊಪಿಸಿದರು.

ಎಲ್ಲಿಯೂ ಇಲ್ಲದ್ದು ಇಲ್ಲೇಕೆ: ನ್ಯಾಯವಾದಿ ಪ್ರದೀಪ್ ಸದ್ದಲಗಿ ಮಾತನಾಡಿ, ರಾಜ್ಯ ಹೆದ್ದಾರಿ ನಿಯಮದಲ್ಲಿ 18 ಅಡಿಗಳಷ್ಟು ಸೆಟ್ ಬ್ಯಾಕ್ ಇರಬಹುದು. ಅದರೆ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿಯೂ ಇದನ್ನು ಪಾಲನೆ ಮಾಡಲಾಗುತ್ತಿಲ್ಲ. ಪಟ್ಟಣದಲ್ಲಿರುವ ಸರ್ಕಾರಿ ಕಟ್ಟಡಗಳೇ ಈ ನಿಯಮ ಪಾಲನೆ ಮಾಡದೇ ನಿರ್ಮಾಣಗೊಂಡಿವೆ. ಮುಖ್ಯರಸ್ತೆ ಅಗಲೀಕರಣದ ಸಮಸ್ಯೆಗಳಿಗೆ ಬಹುತೇಕ ಮುಕ್ತಿ ಸಿಕ್ಕಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತೊಮ್ಮ ಸ್ಥಳ ಪರಿಶೀಲನೆ ನಡೆಸಿ, ಹೊಸ ವಿವಾದಕ್ಕೆ ನಾಂದಿ ಹಾಡದಂತೆ ಮನವಿ ಮಾಡಿದರು.

ವರ್ತಕ ಸಂತೋಷ್ ಹೊಸಂಗಡಿ ಮಾತನಾಡಿ, ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ರಸ್ತೆ ಮಧ್ಯೆದಿಂದ 33 ಅಡಿಗಳಿಗಿಂತ ಹೆಚ್ಚು ಜಾಗ ಅವಶ್ಯವಿಲ್ಲ ಎಂದು ಮಾತನ್ನು ಕೊಟ್ಟಿದ್ದಾರೆ. ಆ ಮಾತುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜಿಲ್ಲಾಧಿಕಾರಿಗಳ ಸ್ಥಾನದ ಘನತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೈಕೋರ್ಟ್ ಮೆಟ್ಟಿಲೇರಿದವರಲ್ಲಿ 77 ಜನರ ಪೈಕಿ 72 ಜನರ ಒಪ್ಪಿಗೆ ನೀಡಿದ್ದಾರೆ. ಇನ್ನುಳಿದ ಮುರಿಗೆಪ್ಪ ಶೆಟ್ಟರ, ಬೀನಾ ಶೆಟ್ಟರ, ಚೇತನ ಕಬ್ಬೂರ, ಮುರುಗೇಶ ಕಬ್ಬೂರ, ಪರಶುರಾಮ ಮೇಲಗಿರಿ ಅವರ ಮನವೊಲಿಸುವ ಕಾರ್ಯವು ಮುಂದುವರಿದಿದೆ ಎಂದರು.

ಈ ಸಂದರ್ಭದಲ್ಲಿ ವಿಶ್ವನಾಥ ಅಂಕಲಕೋಟಿ, ಗಣೇಶ ವೆರ್ಣೇಕರ, ವಿಶ್ವನಾಥ ಅಂಕಲಕೋಟಿ, ಜಯಣ್ಣ(ಪ್ಯಾಟಿ), ರಾಕೇಶ ಜೈನ್, ಸಂಜಯ ಜೈನ್, ಎಂ.ಎಂ. ಹೊಸ್ಮನಿ, ಮಾರುತಿ ಜಾಧವ, ಗಂಗಾಧರ ತಿಳವಳ್ಳಿ, ನಂದೀಶ ವೀರನಗೌಡ್ರ, ಮಾಲತೇಶ ಉಮಾಪತಿ, ಪ್ರಕಾಶ ಅಂಕಲಕೋಟಿ, ವಿ.ಎಲ್. ಪಾಟೀಲ, ಎಂ.ಸಿ. ಗಡಾದ ಇತರರಿದ್ದರು.