ದಾವಣಗೆರೆ ತುಂಗಭದ್ರಾ ಬಡಾವಣೆಯಲ್ಲಿ ಅವ್ಯವಸ್ಥಿತವಾಗಿ ಕಟ್ಟಿದ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಕೋರ್ಟ್ ಸ್ಥಳಾಂತರಿಸುವ ಬದಲು ಈಗಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ ಹಾಗೂ ಖಾಲಿ ಜಾಗದಲ್ಲೇ ಅಗತ್ಯ ಕಟ್ಟಡ ನಿರ್ಮಿಸುವಂತೆ ಶೀಘ್ರವೇ ಸಿಎಂ ಡಿ.ಕೆ.ಶಿವಕುಮಾರ ಬಳಿ ಜಿಲ್ಲೆಯ ಇಬ್ಬರೂ ಮಂತ್ರಿಗಳ ನೇತೃತ್ವದಲ್ಲಿ ನಿಯೋಗ ತೆರಳುವುದಾಗಿ ದಾವಣಗೆರೆ ನ್ಯಾಯಾಲಯ ಸ್ಥಳಾಂತರ ವಿರೋಧಿ ಹೋರಾಟ ಸಮಿತಿ, ಜಿಲ್ಲಾ ವಕೀಲರ ಸಂಘ ನಿರ್ಧರಿಸಿವೆ.
- ಅವ್ಯವಸ್ಥೆ ಆಗರವಾದ ತುಂಗಭದ್ರಾ ಬಡಾವಣೆ ಹೊಸ ಕಟ್ಟಡಕ್ಕೆ ಸ್ಥಳಾಂತರ ಬೇಡ । ಸಚಿವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ತುಂಗಭದ್ರಾ ಬಡಾವಣೆಯಲ್ಲಿ ಅವ್ಯವಸ್ಥಿತವಾಗಿ ಕಟ್ಟಿದ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಕೋರ್ಟ್ ಸ್ಥಳಾಂತರಿಸುವ ಬದಲು ಈಗಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ ಹಾಗೂ ಖಾಲಿ ಜಾಗದಲ್ಲೇ ಅಗತ್ಯ ಕಟ್ಟಡ ನಿರ್ಮಿಸುವಂತೆ ಶೀಘ್ರವೇ ಸಿಎಂ ಡಿ.ಕೆ.ಶಿವಕುಮಾರ ಬಳಿ ಜಿಲ್ಲೆಯ ಇಬ್ಬರೂ ಮಂತ್ರಿಗಳ ನೇತೃತ್ವದಲ್ಲಿ ನಿಯೋಗ ತೆರಳುವುದಾಗಿ ದಾವಣಗೆರೆ ನ್ಯಾಯಾಲಯ ಸ್ಥಳಾಂತರ ವಿರೋಧಿ ಹೋರಾಟ ಸಮಿತಿ, ಜಿಲ್ಲಾ ವಕೀಲರ ಸಂಘ ನಿರ್ಧರಿಸಿವೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಟಿ.ಆರ್.ಗುರುಬಸವರಾಜ ಅವರು, ದೇವರಾಜ ಅರಸು ಬಡಾವಣೆಯಲ್ಲಿ ಈಗಿರುವ ನ್ಯಾಯಾಲಯ ಕಟ್ಟಡ, ಖಾಲಿ ಜಾಗದಲ್ಲಿ ಅಗತ್ಯ ಕಟ್ಟಡ ಕಟ್ಟಲು, ಪಾರ್ಕಿಂಗ್‌ಗೆ ಸೆಲ್ಲರ್ ಮಾಡಲು ಅವಕಾಶವಿದೆ. ತುಂಗಭದ್ರಾ ಬಡಾವಣೆಗೆ ನ್ಯಾಯಾಲಯ ಸ್ಥಳಾಂತರಿಸದೇ, ದೇವರಾಜ ಅರಸು ಬಡಾವಣೆ ಜಾಗದಲ್ಲೇ ಹೊಸ ಕಟ್ಟಡ ಕಟ್ಟಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವಂತೆ ಸಿಎಂಗೆ ಮನವಿ ಮಾಡಲಿದ್ದೇವೆ ಎಂದರು.
ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎಸ್. ಬಸವಂತಪ್ಪ ಇಬ್ಬರನ್ನೂ ಸಂಘದ ನೇತೃತ್ವದಲ್ಲಿ ಭೇಟಿ ಮಾಡಿ, ತುಂಗಭದ್ರಾ ಬಡಾವಣೆಯ ಹೊಸ ಕಟ್ಟಡದಲ್ಲಿ ವಕೀಲರು, ಕಕ್ಷಿದಾರರಿಗೆ ಯಾವುದೇ ಮೂಲಸೌಕರ್ಯಗಳು ಇಲ್ಲದ, ಒಳಚರಂಡಿ, ಕುಡಿಯುವ ನೀರು, ಶೌಚಾಲಯ, ಫೀಡಿಂಗ್ ರೂಂ ಸೇರಿದಂತೆ ಸೌಲಭ್ಯಗಳ ಕೊರತೆ ಇರುವುದನ್ನು ಮನವರಿಕೆ ಮಾಡಿಕೊಡುತ್ತೇವೆ. 2018ರಲ್ಲೇ ನೂತನ ನ್ಯಾಯಾಲಯ ಕಟ್ಟಡ ಮಂಜೂರಾತಿ ಸಿಕ್ಕಿದೆ. ಆದರೆ, ಹೊಸ ನ್ಯಾಯಾಲಯದ ಕಟ್ಟಡದಿಂದ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗಿವೆ. ಈ ಎಲ್ಲ ವಿಚಾರ ಉಭಯ ಸಚಿವರ ಗಮನಕ್ಕೆ ತರಲಿದ್ದೇವೆ ಎಂದು ತಿಳಿಸಿದರು.ಜಿಲ್ಲಾ ಕೇಂದ್ರದಲ್ಲಿ ಸುಮಾರು 1200 ವಕೀಲರಿದ್ದು, ನಿತ್ಯವೂ 2 ಸಾವಿರ ಕಕ್ಷಿದಾರರು ಬಂದು ಹೋಗುವ ನ್ಯಾಯಾಲಯ ಇವು. ಕಳೆದೊಂದು ವರ್ಷದಿಂದಲೂ ನೂತನ ನ್ಯಾಯಾಲಯಗಳ ಕಟ್ಟಡ ಅವ್ಯವಸ್ಥೆಯ ಆಗರವಾದ ಬಗ್ಗೆ ಹೈಕೋರ್ಟ್, ಜಿಲ್ಲಾ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನ್ಯಾಯಾಲಯ, ವಕೀಲರು, ಕಕ್ಷಿದಾರರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲದ ಸ್ಥಳಕ್ಕೆ ಕೋರ್ಟ್ ಸ್ಥಳಾಂತರ ಸರಿಯಲ್ಲ. ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿಲ್ಲ. ಬೆಂಗಳೂರಿನಲ್ಲಿ ನ್ಯಾಯಾಲಯಕ್ಕಾಗಿ ಟರ್ಫ್ ಕ್ಲಬ್ ಜಾಗವನ್ನೇ ಸರ್ಕಾರ ಕೊಡುತ್ತಿದೆ. ನಮಗೆ ಈಗಿರುವಲ್ಲೇ ಹೆಚ್ಚುವರಿ ಕಟ್ಟಡ ಕಟ್ಟಿಕೊಡಲಿ ಎಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಬಡಾವಣೆಯಲ್ಲಿ ಹೊಸ ಕೋರ್ಟ್ ಕಟ್ಟುತ್ತಿದ್ದು, ನಗರದಿಂದ ಆ ಭಾಗಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ಸಹ ಇಲ್ಲ. ಸರಿಯಾದ ಒಳಚರಂಡಿ, ನೀರಿನ ಸೌಲಭ್ಯವಿಲ್ಲ. ಕನಿಷ್ಠ 80-90 ಜನ ಕೂಡುವುದಕ್ಕೂ ಅವಕಾಶ ಇಲ್ಲದಂತೆ ಇಕ್ಕಟ್ಟಾಗಿ ನ್ಯಾಯಾಲಯದ ಕಟ್ಟಡ ಅಲ್ಲಿ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ ಅಲ್ಲಿಗೆ ನ್ಯಾಯಾಲಯ ಸ್ಥಳಾಂತರಿಸಬಾರದು. ಆ ಕಟ್ಟಡವನ್ನು ಸರ್ಕಾರದ ಯಾವುದಾದರೂ ಇಲಾಖೆ, ಶಾಲಾ-ಕಾಲೇಜು ಅಥವಾ ಹಾಸ್ಟೆಲ್‌ಗೆ ಬಳಸುವುದು ಸೂಕ್ತ. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಹೊಸ ಕಟ್ಟಡ ಸೂಕ್ತವೂ ಅಲ್ಲ, ಯೋಗ್ಯವೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ರೇವಣಸಿದ್ದಪ್ಪ, ವಿ.ಗೋಪಾಲ, ಕಂದಗಲ್ಲು ಮಲ್ಲಿಕಾರ್ಜುನ, ಸಿ.ಪಿ.ಅನಿತಾ, ಅಲಮೇಲಮ್ಮ, ಕೆ.ಬಿ.ನಾಗರಾಜ, ಉಚ್ಚಂಗಿದುರ್ಗ ಬಸವರಾಜ, ಸೈಯ್ಯದ್ ಖಾದರ್, ಲಕ್ಕಪ್ಪ, ರಜ್ವಿ ಖಾನ್, ಎಂ.ಸಿ.ಎಂ.ತೀರ್ಥಪ್ಪ, ರಂಗಪ್ಪ ಇತರರು ಇದ್ದರು.
- - -(ಬಾಕ್ಸ್-1)
* ಹೊಸ ಕಟ್ಟಡ ಸಂಚಾರಿ ನ್ಯಾಯಪೀಠಕ್ಕೆ ಬಳಸಲಿಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಮಾತನಾಡಿ, ದೇವರಾಜ ಅರಸು ಬಡಾವಣೆಯಲ್ಲೇ ನ್ಯಾಯಾಲಯಗಳನ್ನು ಮುಂದುವರಿಸಲು, ಹೆಚ್ಚುವರಿ ಕಟ್ಟಡಗಳನ್ನು ಕಟ್ಟಿಸಿಕೊಡಬೇಕೆಂಬ ವಕೀಲರು, ಸಮಿತಿ ಕೂಗಿಗೆ ರೈತರು, ಕಾರ್ಮಿಕರು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಅಲ್ಲದೇ, ವಕೀಲರ ಸಂಘದ 2 ಸಾಮಾನ್ಯ ಸಭೆಗಳಲ್ಲೂ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಕಕ್ಷಿದಾರರಿಂದ ಸರ್ಕಾರಕ್ಕೆ ಆದಾಯವೂ ಹೆಚ್ಚಾಗಿ ಬರುತ್ತದೆ. ಹೊಸ ಕಟ್ಟಡವನ್ನು ಬೇಕಿದ್ದರೆ ಸಂಚಾರಿ ನ್ಯಾಯಪೀಠಕ್ಕೆ ಬಳಸಲಿ. ಸಂಪುಟದಲ್ಲಿ ಸರ್ಕಾರ ಈಗಿರುವ ಕೋರ್ಟ್ ಜಾಗದಲ್ಲೇ ಹೆಚ್ಚುವರಿ ಅಗತ್ಯವಿರುವ ಐದಾರು ನ್ಯಾಯಾಲಯದ ಕಟ್ಟಡ ಕಟ್ಟಿಸಿಕೊಡಲಿ ಎಂದರು.
- - -(ಬಾಕ್ಸ್-2)
* ₹25 ಕೋಟಿ ವೆಚ್ಚದ ಕಟ್ಟಡ ಅವ್ಯವಸ್ಥೆ ಆಗರಹಿರಿಯ ವಕೀಲ ನೀಲಾನಹಳ್ಳಿ ಎನ್.ಎಂ. ಆಂಜನೇಯ ಗುರೂಜಿ ಮಾತನಾಡಿ, 2018ರಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಕ್ಕಾಗ ಕೇಂದ್ರ ಸರ್ಕಾರದ ನೀತಿ ಆಯೋಗ ಇರಲಿಲ್ಲ. ₹25 ಕೋಟಿ ವೆಚ್ಚದ ಕಟ್ಟಡವನ್ನು ಸಂಬಂಧಿಸಿದ ಇಲಾಖೆಯು ಅವ್ಯವಸ್ಥೆಯ ಆಗರ ಎಂಬಂತೆ ಕಟ್ಟಿದೆ. ಕೇಂದ್ರದ ಅನುದಾನ ಕೇಳಿದರೆ, ನೀತಿ ಆಯೋಗದ ಪ್ರಶ್ನೆ ಬರುತ್ತದೆ. ರಾಜ್ಯ ಸಚಿವ ಸಂಪುಟದಲ್ಲೇ ನಿರ್ಣಯ ಕೈಗೊಂಡು, ಈಗಿರುವ ನ್ಯಾಯಾಲಯದ ಕಟ್ಟಡದ ಪ್ರದೇಶದಲ್ಲೇ ಅಗತ್ಯ ನ್ಯಾಯಾಲಯಗಳ ಕಟ್ಟಡ ನಿರ್ಮಿಸಲಿ ಎಂದು ಒತ್ತಾಯಿಸಿದರು.
- - --31ಕೆಡಿವಿಜಿ1.ಜೆಪಿಜಿ: ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ, ನಿಕಟ ಪೂರ್ವ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಇತರೆ ವಕೀಲರು ಸುದ್ದಿಗೋಷ್ಟಿ ನಂತರ ಈಗಿರುವ ಸ್ಥಳದಲ್ಲೇ ನ್ಯಾಯಾಲಯಗಳನ್ನು ಮುಂದುವರಿಸುವಂತೆ ಒತ್ತಾಯಿಸಿದರು.