ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ದುಷ್ಕರ್ಮಿಗಳ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ ನ್ಯಾಯಾಲಯ ಕಲಾಪದಿಂದ ಹೊರ ಉಳಿದು ಮೌನ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ನ್ಯಾಯಾಲಯದ ಆವರಣದಿಂದ ವಕೀಲರು ಕೆಂಪು ಪಟ್ಟಿ ಧರಸಿ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಿಸಿಲನ್ನು ಲೆಕ್ಕಿಸದೇ ಮೆರವಣಿಗೆ ಸಾಗಿ ತಾಲೂಕು ಕಚೇರಿ ಎದುರು ಸೇರಿ ಕೆಲಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಹಿರಿಯ ವಕೀಲ ಸದಾಶಿವ ರೆಡ್ಡಿ ಮೇಲೆ ದಾಳಿ ಖಂಡನೀಯ. ನ್ಯಾಯಾಲಯದಲ್ಲಿ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಘಟನೆಯಿಂದ ವಕೀಲ ಸಮುದಾಯದಲ್ಲಿ ಆತಂಕ ಎದುರಾಗಿದೆ ಎಂದರು.ಪ್ರಕರಣದ ಸಂಬಂಧ ಆರೋಪಿಗಳಿಗೆ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ವಕೀಲರ ರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ಗೃಹ ಮತ್ತು ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಲೋಕೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನಲ್ಲಿ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಟೇಶ್, ಉಪಾಧ್ಯಕ್ಷ ವಿ.ಎಂ.ಮಲ್ಲಪ್ಪ, ಪ್ರಮುಖರಾದ ಎಚ್.ಡಿ.ರೂಪಾ, ಸಿ.ಹರ್ಷವರ್ದನ್, ಡಿ.ಚಂದ್ರಶೇಖರಪ್ಪ, ಜಗದೀಶ್, ಹೇಮಂತ್, ಮೋಹನ್, ಪಿ.ಎನ್.ಮಹೇಶ್, ಶ್ರೀನಿವಾಸ್ ಕುಮಾರ್, ಜಿ.ಪಿ.ರಮೇಶ್, ವಿ.ನಾರಾಯಣಮೂರ್ತಿ, ವಿಜಯ ಭಾಸ್ಕರ್ ರಾವ್, ಜೆ.ರಾಣಿ ಪಾಲ್ಗೋಂಡಿದ್ದರು.
ಹಿರಿಯ ವಕೀಲ ವೈ.ಆರ್ ಸದಾಶಿವರೆಡ್ಡಿ ಮೇಲೆ ಹಲ್ಲೆಗೆ ಖಂಡನೆಮಳವಳ್ಳಿ:
ಭಾರತೀಯ ವಕೀಲ ಪರಿಷತ್ತಿನ ಸದಸ್ಯ ಹಾಗೂ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೃತ್ಯವನ್ನು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸಕುಮಾರ ತೀವ್ರವಾಗಿ ಖಂಡಿಸಿದ್ದಾರೆ.ವಕೀಲ ವೈ.ಆರ್.ಸದಾಶಿವರೆಡ್ಡಿ ಅವರ ಕಚೇರಿಗೆ ಏಪ್ರಿಲ್ 15ರಂದು ದುಷ್ಕರ್ಮಿಗಳು ನುಗ್ಗಿ ಏಕಾಏಕಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈಗಾಗಲೇ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಯಾಗಿದ್ದರೂ ಕೂಡಾ ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೇ ಹಲ್ಲೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪೊಲೀಸರು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಒತ್ತಾಯಿಸುತ್ತದೆ. ಘಟನೆಯಿಂದ ವಕೀಲರ ಸಮುದಾಯದಲ್ಲಿ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಕೋರಿದ್ದಾರೆ.