ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಕ್ಷೀದಾರರಿಗೆ ಶೀಘ್ರ ನ್ಯಾಯದಾನಕ್ಕೆ ವಕೀಲರು ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ಕೆಲಸ ಮಾಡಬೇಕು ಎಂದು ಪಾಂಡವಪುರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಹೇಶ್ ಮನವಿ ಮಾಡಿದರು.ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯಕ್ಕೆ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುಧೀರ್ ಮತ್ತು ಅಪರ ಸಿವಿಲ್ ನ್ಯಾಯಾಧೀಶ ದೇವರಾಜ್ ಅವರನ್ನು ಸ್ವಾಗತಿಸಿ ನೂತನ ನ್ಯಾಯಾಂಗಣವನ್ನು ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ನ್ಯಾಯಾಲಯದಲ್ಲಿ 4500ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಶೀಘ್ರವಾಗಿ ಕಕ್ಷೀದಾರರಿಗೆ ನ್ಯಾಯ ಒದಗಿಸಿಕೊಡುವ ದಿಕ್ಕಿನಲ್ಲಿ ವಕೀಲರು ಬದ್ಧತೆಯಿಂದ ವಾದ ಮಂಡಿಸಿ ಶೀಘ್ರ ನ್ಯಾಯದಾನಕ್ಕೆ ನ್ಯಾಯಧೀಶರಿಗೆ ಪೂರಕ ಸಹಕಾರವನ್ನು ನೀಡಿ ಕೆಲಸ ಮಾಡಬೇಕು ಎಂದರು.ರಾಜ್ಯ ಉಚ್ಚ ನ್ಯಾಯಾಲಯವು ಅತಿ ಶೀಘ್ರದಲ್ಲಿಯೇ ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವನ್ನು ಆರಂಭ ಮಾಡುವ ಸಾಧ್ಯತೆ ಇದೆ. ನೀವು ಶ್ರೀರಂಗಪಟ್ಟಣದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕ್ರಿಮಿನಲ್ ಕೇಸುಗಳಿಗಾಗಿ ಅಲೆದಾಡುವ ಅಗತ್ಯವು ಸದ್ಯದಲ್ಲೇ ನಿಲ್ಲಲಿದೆ ಎಂದರು.
ನೂತನ ನ್ಯಾಯಾಧೀಶರಾದ ಸುಧೀರ್ ಮತ್ತು ದೇವರಾಜು ಮಾತನಾಡಿ, ಈವರೆಗೆ ನ್ಯಾಯಾಧೀಶರಾಗಿ ಕೆಲಸ ಮಾಡಿರುವ ನ್ಯಾಯಾಧೀಶರುಗಳಿಗೆ ನೀಡಿರುವಂತೆ ತಮಗೂ ಕೆಲಸ ಮಾಡಲು ವಕೀಲರ ಸಂಘ ಹಾಗೂ ವಕೀಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ ಮಾತನಾಡಿ, ವಕೀಲರು ನೂತನ ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ನ್ಯಾಯ ಬದ್ಧವಾಗಿ ತೀರ್ಪು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಇಲ್ಲಿನ ವಕೀಲರು ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದವರು. ಪ್ರಕರಣಗಳ ಇತ್ಯರ್ಥದ ವೇಳೆ ವಕೀಲರುಗಳಿಂದ ಸಣ್ಣಪುಟ್ಟ ಲೋಪ ದೋಷಗಳಾದರೆ, ಅವರನ್ನು ತಿದ್ದಿತೀಡಿ ಪೂರಕವಾದ ಸಹಕಾರ ನೀಡಿ ಕೆಲಸ ಮಾಡಲು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಕಾರ್ಯದರ್ಶಿ ರಾಜೇಗೌಡ, ಪದಾಧಿಕಾರಿಗಳಾದ ದಿನೇಶ್, ಡಿ.ಆರ್.ಜಗದೀಶ್, ನಿರಂಜನ, ಸುಜಾತ, ಹಿರಿಯ ವಕೀಲರರಾದ ಎಸ್.ಸಿ.ವಿಜಯಕುಮಾರ್, ಜಿ.ಆರ್. ಅನಂತರಾಮಯ್ಯ, ಎಂ.ಆರ್. ಪ್ರಸನ್ನಕುಮಾರ್, ಕೆ.ಎನ್.ನಾಗರಾಜು, ಕೆರೆಮೇಗಳಕೊಪ್ಪಲು ಶಂಕರೇಗೌಡ, ಬಂಡಿಹೊಳೆ ಗಣೇಶ್, ಗಂಜಿಗೆರೆ ಲೋಕೇಶ್, ಎಂ.ಎಲ್.ಸುರೇಶ್, ಸಿ.ಎನ್.ಮೋಹನ್, ಕೆ.ಆರ್.ಮಹೇಶ್, ನಯಾಜ್‌ಪಾಷ, ಮಂಜುನಾಥ್ ಉಪಸ್ಥಿತರಿದ್ದರು.