ಮುಂಡಗೋಡದಲ್ಲಿ ಉಪನೋಂದಣಾಧಿಕಾರಿಗಳ ವಿರುದ್ಧ ವಕೀಲರ ಪ್ರತಿಭಟನೆ

| Published : Oct 09 2024, 01:38 AM IST

ಮುಂಡಗೋಡದಲ್ಲಿ ಉಪನೋಂದಣಾಧಿಕಾರಿಗಳ ವಿರುದ್ಧ ವಕೀಲರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪ ನೋಂದಣಾಧಿಕಾರಿಗಳು ಯಾವುದೇ ದಸ್ತಾವೇಜನ್ನು ನೋಂದಣಿ ಮಾಡಲು ಹೇರಳ ಹಣವನ್ನು ಕೇಳುತ್ತಿದ್ದು, ಇದರಿಂದ ಬಡವರಿಗೆ ತೊಂದರೆ, ಅನ್ಯಾಯವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಂಡಗೋಡ: ಉಪನೋಂದಣಾಧಿಕಾರಿಯವರು ಹಿರಿಯ ವಕೀಲರೊಂದಿಗೆ ಅನುಚಿತ ಹಾಗೂ ಅಗೌರವವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಂಡಗೋಡ ವಕೀಲರ ಸಂಘವು ಮಂಗಳವಾರ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿತು.

ಅ. ೭ರಂದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ವಕೀಲ ಬಿ.ಎಫ್. ಪೂಜಾರ ಅವರು ತಮ್ಮ ಪಕ್ಷಗಾರರ ಪರ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಕಾಗದ ಪತ್ರಗಳ ಮಾಹಿತಿ ಪೂರೈಸುವಂತೆ ಅರ್ಜಿ ಸಲ್ಲಿಸಲು ಹೋದಾಗ ಉಪನೋಂದಣಾಧಿಕಾರಿಗಳು ಮಧ್ಯಾಹ್ನ ಬರುವಂತೆ ತಿಳಿಸಿದ್ದರು. ಅದರಂತೆ ಮಧ್ಯಾಹ್ನ ಅರ್ಜಿ ಸಲ್ಲಿಸಲು ಹೋದಾಗಲೂ ಅರ್ಜಿ ಸ್ವೀಕರಿಸದೆ ಇದ್ದಾಗ ವಕೀಲ ಪೂಜಾರ ಅವರು ಉಪ ನೋಂದಣಾಧಿಕಾರಿಗಳಯವರು ಅರ್ಜಿಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅರ್ಜಿ ಸ್ವೀಕರಿಸಿ ಹಿಂಬರಹ ನೀಡುವಂತೆ ಹೇಳಿದಾಗ, ಉಪನೋಂದಣಾಧಿಕಾರಿಯವರು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಅಲ್ಲದೇ ಮಂಗಳವಾರ ಪಕ್ಷಗಾರರು ಉಪನೋಂದಣಾಧಿಕಾರಿಗಳ ಕಚೇರಿಗೆ ಹೋದಾಗ ಅರ್ಜಿದಾರರು ಕೋರಿದ ದಾಖಲಾತಿಗಳನ್ನು ಕೊಡದೆ ಬೇರೆ ಕಾಗದ ಪತ್ರಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಅದೇ ರೀತಿ ಉಪ ನೋಂದಣಾಧಿಕಾರಿಗಳು ಯಾವುದೇ ದಸ್ತಾವೇಜನ್ನು ನೋಂದಣಿ ಮಾಡಲು ಹೇರಳ ಹಣವನ್ನು ಕೇಳುತ್ತಿದ್ದು, ಇದರಿಂದ ಬಡವರಿಗೆ ತೊಂದರೆ, ಅನ್ಯಾಯವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ವಕೀಲರ ಸಂಘದ ಅಧ್ಯಕ್ಷ ನಟರಾಜ ಕಾತೂರ, ಸಂಗಮೇಶ ಕೊಳ್ಳಾನವರ, ಗುಡ್ಡಪ್ಪ ಕಾತೂರ, ರಾಘವೇಂದ್ರ ಮಳಗಿಕರ, ಮಂಜುನಾಥ ರೇವಣಕರ ಮುಂತಾದವರು ಉಪಸ್ಥಿತರಿದ್ದರು.