ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ವಕೀಲರ ಜವಾಬ್ದಾರಿ

| Published : Sep 26 2025, 01:02 AM IST

ಸಾರಾಂಶ

ನ್ಯಾಯ ಸಿಗುವ ದಿಸೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯಯುತವಾಗಿರುವ ವಾದ ಮಂಡನೆ ಮಾಡುವುದು ಬಹಳ ಮುಖ್ಯವಾಗಿದೆ

ಕೊಪ್ಪಳ: ವಕೀಲರು ವಕಾಲತ್ತು ಮಾಡುವುದು ಕೇವಲ ವಾದಕ್ಕಾಗಿ ಅಲ್ಲ, ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಮಹತ್ವದ ಜವಾಬ್ದಾರಿ ಹೊಂದಿರುತ್ತಾರೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿ.ಚಂದ್ರಶೇಖರ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ಜಿಲ್ಲಾ ವಕೀಲರ ಸಂಘ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ವಕೀಲರ ಸಂಘದ ಸಹಯೋಗದಲ್ಲಿ ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಐದು ದಿನಗಳ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಕ್ಷಿದಾರರು ವಕೀಲರನ್ನೇ ನಂಬಿ ಬಂದಿರುತ್ತಾರೆ. ಅವರಿಗೆ ನ್ಯಾಯ ಸಿಗುವ ದಿಸೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯಯುತವಾಗಿರುವ ವಾದ ಮಂಡನೆ ಮಾಡುವುದು ಬಹಳ ಮುಖ್ಯವಾಗಿದೆ ಎಂದರು.

ಇತ್ತೀಚೆಗೆ ದಿನಗಳಲ್ಲಿ ಯುವ ವಕೀಲರು ಹೆಚ್ಚಿನ ಮಟ್ಟದಲ್ಲಿ ಅರ್ಜಿ ಸಲ್ಲಿಸಿ, ವಾದ ಮಂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರ ಜತೆಗೆ ಯವ ವಕೀಲರು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದರು.

ರಾಜ್ಯ ಉಚ್ಚ ನ್ಯಾಯಾಲಯ, ಸುಪ್ರೀಂ ಕೋರ್ಟ್ ಸೇರಿದಂತೆ ದೇಶದಾದ್ಯಂತ ನಡೆಯುವ ವಾದ ವಿವಾದ ಆಲಿಸುತ್ತಲೇ ಅವರು ತೀರ್ಪು ಕುರಿತು ಅಧ್ಯಯನ ಮಾಡಿಕೊಳ್ಳುವ ಮೂಲಕ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದರು.

ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ.ಮಾತನಾಡಿ, ವಕೀಲರಿಗೆ ಕಾನೂನು ಕಾರ್ಯಾಗಾರ ವೃತ್ತಿಯ ಬೆಳವಣಿಗೆಗೆ ಅನುಕೂಲವಾಗಲಿದೆ.ಇಂಥ ಕಾರ್ಯಾಗಳಿಂದ ಹಿರಿಯ ಜ್ಞಾನದ ಹರಿವು ಪಡೆಯಲು ಸಾಧ್ಯವಾಗುತ್ತದೆ. ಗೊಂದಲಗಳಿಗೆ ಪರಿಹಾರ ಕೊಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಎಸ್. ಎಸ್. ಮಿಟ್ಟಲಕೋಡ ಮಾತನಾಡಿ, ಈಚೆಗಿನ ದಿನಗಳಲ್ಲಿ ನಕಲಿ ವಕೀಲರ ಹಾವಳಿ ಕಡಿಮೆಯಾಗುತ್ತಿರುವುದು ಸಮಾಧಾನ ತಂದಿದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್. ಹರೀಶ ಮಾತನಾಡಿ, ಕೊಪ್ಪಳದಲ್ಲಿ ವಕೀಲರು ಹೋರಾಟ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶೆ ಸರಸ್ವತಿ ದೇವಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶ ಮಲಕಾರಿ ಒಡೆಯರ್, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ತ್ರಿವೇಣಿ ಈರಗಾರ, ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್ ಅಲಿ, ಮಾಜಿ ಸದಸ್ಯೆ ಸಂದ್ಯಾ ಬಿ. ಮಾದಿನೂರು, ವಕೀಲರ ಸಂಘದ ತಾಲೂಕಾಧ್ಯಕ್ಷ ಎನ್.ನಾಯಕ್, ಎಸ್.ಎಸ್. ಹೊಂಬಳ, ಡಿ.ಎಸ್. ಪಾಟೀಲ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ, ಪ್ರಧಾನ ಕಾರ್ಯದರ್ಶಿ ಪ್ರಕಾಶ.ಎಲ್. ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ. ಕವಲೂರು, ಖಜಾಂಚಿ ರಾಜಾಸಾಬ ಬೆಳಗುರ್ಕಿ ಸೇರಿದಂತೆ ಇತರರು ಇದ್ದರು.