ವಕೀಲನಾದವನು ಜಾತಿ, ಧರ್ಮ, ಲಿಂಗಗಳ ಪಕ್ಷಪಾತ ಮಾಡದೇ ನಿಕ್ಷಪಕ್ಷಪಾತಿಯಾಗಿ ಸೇವೆ ಸಲ್ಲಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್. ಬಿಳ್ಳಪ್ಪ ಹೇಳಿದರು.
ಹುಬ್ಬಳ್ಳಿ: ವಕೀಲನಾದವನು ಜಾತಿ, ಧರ್ಮ, ಲಿಂಗಗಳ ಪಕ್ಷಪಾತ ಮಾಡದೇ ನಿಕ್ಷಪಕ್ಷಪಾತಿಯಾಗಿ ಸೇವೆ ಸಲ್ಲಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್. ಬಿಳ್ಳಪ್ಪ ಹೇಳಿದರು.
ಅವರು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ 12ನೇ ರಾಷ್ಟ್ರೀಯ ಅಣುಕು ನ್ಯಾಯಾಲಯ ಸ್ಪರ್ಧೆ ಸಮಾರೋಪದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ವಕೀಲ ವೃತ್ತಿಯು ಉದಾತ್ತ ವೃತ್ತಿ. ವಕೀಲರಾಗಿ ವೃತ್ತಿ ಕೈಗೊಳ್ಳುವವರು ಅಪಾರವಾದ ಕಲಿಕೆ ಹಾಗೂ ಕಾನೂನು ತಿಳಿವಳಿಕೆ, ಜ್ಞಾನ ಎಲ್ಲವನ್ನು ಸಮಾಜದ ಸೇವೆಗೆ ಮುಡುಪಿಡಬೇಕು. ಯಾವುದೇ ಲಾಭದಾಯಕ ಮನೋಭಾವನೆಯನ್ನು ಇಟ್ಟುಕೊಳ್ಳದೇ ಸಮಾಜಕ್ಕಾಗಿ ಮತ್ತು ತನ್ನನ್ನು ನಂಬಿರುವ ಕಕ್ಷಿದಾರನ ಸಲುವಾಗಿ ಸೇವೆ ಸಲ್ಲಿಸುವುದರೊಂದಿಗೆ ನ್ಯಾಯ ದೊರಕಿಸಿಕೊಡಬೇಕು. ಒಬ್ಬ ನಿಜವಾದ ವಕೀಲನ ಮುಖ್ಯ ಕರ್ತವ್ಯವೇನೆಂದರೆ ಕಕ್ಷಿದಾರನ ದೃಷ್ಟಿಯಲ್ಲಿ ನಂಬಿಕೆಯನ್ನು ಗಳಿಸಿ ಉಳಿಸಿಕೊಳ್ಳುವುದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ವಿಶಾಖಪಟ್ಟಣಂನ ದಾಮೋದರಂ ಸಂಜೀವಯ್ಯ ನ್ಯಾಶನಲ್ ಲಾ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ದಯಾನಂದ ಮೂರ್ತಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಧೈರ್ಯ, ಭಾಷಾ ಸಂವಹನ, ವಾದ ಮಂಡನೆ ಮತ್ತು ನಂಬಿಕೆ ವಿಶ್ವಾಸ ಮುಂತಾದ ವೃತ್ತಿ ಗುಣಲಕ್ಷಣಗಳು ಬಹಳ ಮುಖ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಮೌಲ್ಯಗಳನ್ನು ಅರಿತು ಜೀವನದಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಆರೋಗ್ಯಕರ ಸಮಾಜ ಸೃಷ್ಟಿಯಾಗಬಲ್ಲದು. ಸಮಾಜದಲ್ಲಿ ಯಾವ ವ್ಯಕ್ತಿಗೆ ನ್ಯಾಯದ ಅವಶ್ಯಕತೆ ಇದೆಯೋ ಅಂತಹವರಿಗೆ ನ್ಯಾಯ ದೊರಕಿಸಿಕೊಡುವುದು ಒಬ್ಬ ನಿಜವಾದ ವಕೀಲನ ಕರ್ತವ್ಯ ಎಂದರು.
ಮೌಲ್ಯ ಮಾಪನ ಕುಲಸಚಿವೆ ಪ್ರೊ. ಡಾ. ರತ್ನಾ ಭರಮಗೌಡರ್, ಹಿರಿಯ ವಕೀಲ ಕೆ.ಎಲ್. ಪಾಟೀಲ್, ಸಂಯೋಜಕ ಡಾ. ಸುನೀಲ್ ಬಾಗಡೆ, ಡಾ. ರಾಜೇಂದ್ರಕುಮಾರ ಹಿಟ್ಟಣಗಿ, ಡಾ. ಕುಮುದಾ ಕರೊಗಲ್, ವಿಜಯಲಕ್ಷ್ಮೀ ಮತ್ತು ಮನಿಶಾ ಎಂ. ಸೇರಿದಂತೆ ಸಿಂಡಿಕೇಟ್ ಸದಸ್ಯರು, ಹಿರಿಯ ವಕೀಲರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿದ್ಯಾರ್ಥಿನಿ ಐಶ್ವರ್ಯಾ ಭಟ್ ಪ್ರಾರ್ಥಿಸಿದರು. ಸ್ಫೂರ್ತಿ ಹೊಸಕೇರಿ ಸ್ವಾಗತಿಸಿದರು. ಡಾ. ಕುಮುದಾ ಕರೊಗಲ್ ವಂದಿಸಿದರು. ಅನನ್ಯ ಎಸ್ ನಿರೂಪಿಸಿದರು.ವಿಜೇತರು: ಸ್ಪರ್ಧೆಯಲ್ಲಿ ಬೆಸ್ಟ್ ಮೆಮೋರಿಯಲ್ ಪ್ರಶಸ್ತಿಯನ್ನು ಬೆಂಗಳೂರಿನ ರಾಮಯ್ಯ ಕಾನೂನು ಮಹಾವಿದ್ಯಾಲಯ, ಬೆಸ್ಟ್ ಜೆಂಟಲ್‌ಮನ್ ಅಡ್ವೊಕೇಟ್ ಪ್ರಶಸ್ತಿಯನ್ನು ಮೈಸೂರಿನ ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌ನ ಜೀವನ್ ಎಂ. ಬೆಸ್ಟ್ ಮಹಿಳಾ ಅಡ್ವೋಕೇಟ್ ಪ್ರಶಸ್ತಿಯನ್ನು ಮೈಸೂರಿನ ವಿದ್ಯಾವರ್ಧಕ ಕಾನೂನು ಮಹಾವಿದ್ಯಾಲಯದ ಚಾರುಮತಿ ಎಸ್, ಮೈಸೂರಿನ ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ರನ್ನರ್‌ಅಪ್ ಪ್ರಶಸ್ತಿ ಪಡೆದರೆ ಹುಬ್ಬಳ್ಳಿ ಜಿ.ಕೆ. ಕಾನೂನು ಕಾಲೇಜು ವಿನ್ನರ್ ಆಗಿ ಹೊರಹೊಮ್ಮಿತು.