ಸಾರಾಂಶ
ಶಿರಸಿ: ಪತ್ತಿನ ಸಹಕಾರಿ ಸಂಘಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ನಡೆಯುತ್ತಿದ್ದರೆ, ಸೌಹಾರ್ದ ಸಹಕಾರಿ ಸಂಘಗಳ ಅನಿಯಂತ್ರಿತ ಬೆಳವಣಿಗೆಯು ಸಹಕಾರಿ ಕ್ಷೇತ್ರದ ಮೇಲೆ ದೊಡ್ಡ ಪೆಟ್ಟು ನೀಡಿದೆ ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ನಗರದ ಕೆಡಿಸಿಸಿ ಬ್ಯಾಂಕ್‌ನ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಭಾಗದ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಸಹಕಾರಿ ಸಂಘಗಳನ್ನು ಮುನ್ನೆಡೆಸಿಕೊಂಡು ಹೋಗಬೇಕಾಗಿದ್ದು, ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ತರಬೇತಿ ಅತ್ಯವಶ್ಯವಾಗಿದೆ. ಸತ್ಯದ ವಿಷಯ ಕುರಿತು ತರಬೇತಿಯಲ್ಲಿ ಚರ್ಚೆಯಾಗಬೇಕು. ರಾಜ್ಯದಲ್ಲಿ ೮ ಕಡೆ ಮಾತ್ರ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಜೀವಂತವಿದೆ. ಉಳಿದ ಎಲ್ಲ ಕಡೆಗಳಲ್ಲಿಯೂ ತನ್ನ ಅಸ್ತಿತ್ವ ಕಳೆದುಕೊಂಡಿದ್ದು, ಶೂನ್ಯ ಬಡ್ಡಿದರ, ಶೇ. ೩ರಷ್ಟು ಬಡ್ಡಿದರಲ್ಲಿ ಸಾಲ ನೀಡಬೇಕು. ಸರ್ಕಾರ ಬಡ್ಡಿ ಸಹಾಯಧನ ನೀಡಿದಾಗ ತೆಗೆದುಕೊಳ್ಳಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರಣ ಹಾಗೂ ನಬಾರ್ಡ್ ಮತ್ತು ಆರ್.ಬಿ.ಐ. ನಿಯಮಕ್ಕೆ ಒಳಪಟ್ಟ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಸಹಕಾರಿ ಸಂಘಗಳಿಗೆ ನೀಡಿದ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು. ಹಣದ ಬಗ್ಗೆ ವಿಶ್ವಾಸ ಮೂಡಿಸಬೇಕು. ಕೆಲ ದುಷ್ಪರಿಣಾಮದ ಎಚ್ಚರಿಕೆ ವಹಿಸಬೇಕು. ರೈತ, ಪ್ರಾಥಮಿಕ ಸಹಕಾರಿ ಸಂಘ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಕೆಡಿಸಿಸಿ ಬ್ಯಾಂಕ್ ೧೦೫ ವರ್ಷದಲ್ಲಿಯೂ ಲಾಭದಲ್ಲಿ ಮುಂದುವರೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಜಿಲ್ಲಾ ಸಹಕಾರಿ ಸಂಸ್ಥೆ ಅವನತಿಯತ್ತ ಸಾಗುತ್ತದೆ. ೩೫ ಲಕ್ಷ ರೈತ ಕುಟುಂಬ ಬೀದಿಗೆ ಬೀಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಕುರಿತು ಬಿ.ವಿ. ರವೀಂದ್ರನಾಥ, ಆದಾಯ, ವೃತ್ತಿ ಹಾಗೂ ಸರಕು ಸೇವಾ ತೆರಿಗೆಗಳು (ಜಿಎಸ್‌ಟಿ) ಕುರಿತು ವರುಣ ಭಟ್ಟ ಹಾಗೂ ಸಹಕಾರ ಸಂಘಗಳಲ್ಲಿ ಆಡಳಿತ ನಿರ್ವಹಣೆ ಕುರಿತು ಮಹೇಶ ಮಾಶಾಳ ತರಬೇತಿ ನೀಡಿದರು.
ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ, ನಿರ್ದೇಶಕ ಮಹೇಂದ್ರ ಭಟ್ಟ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಸುಭಾಷ ತಳವಾರ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಪ್ರಮುಖರಾದ ಜೆ.ಕೆ. ರಾಮಪ್ಪ, ಸಂತೋಷ ನೆತ್ರೇಕರ ಮತ್ತಿತರರು ಇದ್ದರು.ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಸಂಗಡಿಗರು ಪ್ರಾರ್ಥಿಸಿದರು.ಹಸ್ತಕ್ಷೇಪ ಬೇಡ
ಸಹಕಾರ ಸ್ವಾತತ್ತೆತ ಮತ್ತು ರಕ್ಷಣೆಗೆ ಹೋರಾಟ ಮಾಡುವ ಕಾಲಘಟ್ಟದಲ್ಲಿದ್ದೇವೆ. ಕಳೆದ ೫೦ -೬೦ ವರ್ಷಗಳು ಕಷ್ಟಪಟ್ಟು ಸಹಕಾರಿ ಕ್ಷೇತ್ರ ಬೆಳೆಸಿದ್ದಾರೆ. ಈ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಆದರೆ ಬಹಳ ಕಾಲ ಜೀವಂತ ಇರಲು ಸಾಧ್ಯವಿಲ್ಲ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೇಳಿದ್ದಾರೆ.