ರೈತರ ಕಣ್ಣೀರು ಒರೆಸಿದ ನಾಯಕ ಎಚ್‌ಡಿಕೆ: ಅನಿತಾ ಕುಮಾರಸ್ವಾಮಿ

| Published : Apr 20 2024, 01:06 AM IST

ರೈತರ ಕಣ್ಣೀರು ಒರೆಸಿದ ನಾಯಕ ಎಚ್‌ಡಿಕೆ: ಅನಿತಾ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಹೋಬಳಿ ಮಟ್ಟಕ್ಕೆ ಆಸ್ಪತ್ರೆ, ಶಾಲಾ-ಕಾಲೇಜು, ವಿದ್ಯುತ್ ಸಬ್ ಸ್ಟೇಷನ್, ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕೊಡುಗೆ ಅಪಾರವಾಗಿದ್ದು, ದೇವೇಗೌಡರು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ನ್ಯಾಯ ಕೊಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ರೈತರು ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಮೃತ ರೈತರ ಕುಟುಂಬಗಳ ನೆರವಿಗೆ ನಿಂತು ಕಣ್ಣೀರು ಒರೆಸಿದ ನಾಯಕ ಕುಮಾರಸ್ವಾಮಿ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜೆಡಿಎಸ್‌-ಬಿಜೆಪಿ ಮಹಿಳಾ ಘಟಕದಿಂದ ನಡೆದ ಜೆಡಿಎಸ್‌-ಬಿಜೆಪಿ ಮಹಿಳಾ ಸಮನ್ವಯ ಸಮಾವೇಶವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿ, ರೈತರ ಆತ್ಮಹತ್ಯೆ ತಪ್ಪಿಸುವ ಉದ್ದೇಶದಿಂದ ಯಾರ ಸಹಕಾರವಿಲ್ಲದಿದ್ದರೂ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದರು. ಸಾಲ ಮನ್ನಾದಲ್ಲಿ ಸಿಂಹ ಪಾಲು ಮಂಡ್ಯ ರೈತರಿಗೆ ಅನುಕೂಲವಾಗಿದೆ ಎಂದರು.

ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಅವರು ಈ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದುಕೊಂಡಿರಲಿಲ್ಲ. ಮಂಡ್ಯ ಜನರ ಮೇಲೆ ಅವರಿಗಿರುವ ಅಭಿಮಾನ ಕಂಡು ದೇವರೇ ಅವರಿಗೆ ಮನಸ್ಸು ಕೊಟ್ಟಿರಬಹುದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಹೋಬಳಿ ಮಟ್ಟಕ್ಕೆ ಆಸ್ಪತ್ರೆ, ಶಾಲಾ-ಕಾಲೇಜು, ವಿದ್ಯುತ್ ಸಬ್ ಸ್ಟೇಷನ್, ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕೊಡುಗೆ ಅಪಾರವಾಗಿದ್ದು, ದೇವೇಗೌಡರು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ನ್ಯಾಯ ಕೊಡಿಸಿದ್ದಾರೆ. ಜಿಲ್ಲೆಯ ನೀರಾವರಿ ಕ್ಷೇತ್ರಕ್ಕೆ ದೇವೇಗೌಡರ ಶ್ರಮ ಇಲ್ಲದಿದ್ದರ ಮಂಡ್ಯ ಬರಡು ಭೂಮಿಯಾಗಿರುತ್ತಿತ್ತು ಎಂದು ನುಡಿದರು.

ಎಲ್ಲಾ ರಾಜಕಾರಣಿಗಳಿಗೂ ಕೆಲಸಮಾಡುವ ಇಚ್ಛಾಶಕ್ತಿ ಇರಬೇಕು. ಮಂಡ್ಯಕ್ಕೆ ಕುಮಾರಸ್ವಾಮಿ, ದೇಶಕ್ಕೆ ಮೋದಿ ಬೇಕು. ಮೋದಿ ನಾಯಕತ್ವವನ್ನು ನಮ್ಮ ಮಾವನವರೂ ಒಪ್ಪಿದ್ದಾರೆ. ಈ ದೇಶಕ್ಕೆ ಮೋದಿ ಅವರಂತಹ ನಾಯಕತ್ವ ಬೇಕು ಎಂದಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟು ಹೆಚ್ಚು ಮತ ಹಾಕಿಸುವಂತೆ ಮನವಿ ಮಾಡಿದರು.

ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶ ಸಿಗಬೇಕು. ಅವಕಾಶ ಸಿಕ್ಕಾಗ ಅದನ್ನು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು. ಮಂಡ್ಯ ಜಿಲ್ಲೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ ಕುಮಾರಸ್ವಾಮಿ ಗೆಲುವು ಮುಖ್ಯವಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್‌ ಮುಖಂಡ ಬಿ.ಆರ್.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್, ನಗರ ಘಟಕದ ಅಧ್ಯಕ್ಷೆ ಜಯಶೀಲಮ್ಮ, ಪದ್ಮಾವತಿ, ನಾಗಮ್ಮ, ಕಲ್ಪನಾ ರಾಮಚಂದ್ರ, ಮಂಗಳ ನವೀನ್ ಇತರರಿದ್ದರು.