ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವೀರಶೈವ ಮಹಾಸಭಾದ ನಿರ್ದೇಶಕರ ಆಯ್ಕೆಯನ್ನು ಅವಿರೋಧವಾಗಿ ಮಾಡುವಂತೆ ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ತೋಂಟಪ್ಪಶೆಟ್ಟಿ ನೇತೃತ್ವದಲ್ಲಿ ಮುಖಂಡರು ಮನವಿ ಮಾಡಿದರು.ಪಟ್ಟಣದ ಸುಭಾಷ ನಗರದ ಚನ್ನಬಸವೇಶ್ವರ ಪತ್ತಿನಸಹಕಾರ ಸಂಘದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಶೈವ ಸಮಾಜದ ಮುಖಂಡರು, ಇಡೀ ಸಮುದಾಯ ಒಕ್ಕೊರಲಿನಿಂದ ಚುನಾವಣೆ ಎದುರಿಸದೇ ಅವಿರೋಧ ಆಯ್ಕೆಗೆ ಸಿದ್ಧವಿದ್ದೇವೆ. ಅಗತ್ಯಬಿದ್ದರೆ ಚುನಾವಣೆಗೂ ಸಿದ್ದ ಎಂದರು.
ಸಮಾಜದ ಹಿತದೃಷ್ಟಿಯಿಂದ ಚುನಾವಣಾ ಸ್ಪರ್ಧೆ ಕೈಬಿಟ್ಟು ಎಲ್ಲಾ ನಿದೇಶಕರನ್ನೂ ಅವಿರೋಧವಾಗಿ ಆಯ್ಕೆ ಮಾಡುವುದು ಒಳಿತು. ಇದಕ್ಕೆ ಸಮುದಾಯದ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ತಾಲೂಕು ಮುಖಂಡ ತೋಟಪ್ಪಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಮಹಾನ್ ಸಾಧನೆ ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ದೂರಿದರು.
ತಾಲೂಕಿನ ವೀರಶೈವ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅಭಿವೃದ್ಧಿ ಮಾಡದೇ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಇದರಿಂದ ಸಮಾಜದ ಬಂಧುಗಳು ತೀವ್ರ ಬೇಸರದಲ್ಲಿದ್ದಾರೆ. ಈಗ ಚುನಾವಣಾ ಸಮಯ ಬಂದಿದ್ದು, ಎಲ್ಲರೂ ಒಗ್ಗೂಡಿ ಅವಿರೋಧವಾಗಿ ಮಾತುಕತೆಯ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳಲು ನಾವುಗಳು ಸಿದ್ಧರಿದ್ದೇವೆ ಎಂದರು.ಇದಕ್ಕೆ ಕೆಲವರು ಅಪಸ್ವರ ಎತ್ತುವ ನಿರೀಕ್ಷೆ ಇದೆ. ಸರ್ವ ಸಮ್ಮತ ತೀರ್ಮಾನಕ್ಕೆ ಬರಲು ಒಪ್ಪದಿದ್ದಲ್ಲಿ ನಾವುಗಳೂ ಸಹ ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ. ಆದ್ದರಿಂದ ಸಮಾಜದ ಮುಖಂಡರು ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನಮ್ಮ ಅನಿಸಿಕೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯ ಮುಖಂಡರಾದ ಬ್ಯಾಂಕ್ ಪರಮೇಶ್, ಸಾಸಲು ಈರಪ್ಪ, ನಿವೃತ್ತ ಶಿಕ್ಷಕ ಚನ್ನರಾಜು, ತಾಪಂ ಮಾಜಿ ಸದಸ್ಯ ಮಾಧವಪ್ರಸಾದ್, ವಕೀಲ ಪುರಮಂಜು, ಸಾಸಲು ಗುರುಮೂರ್ತಿ ಸೇರಿದಂತೆ ಹಲವಾರು ಮುಖಂಡರು ಇದ್ದರು.ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಚಂದ್ರನಾಯಕ್ ಒತ್ತಾಯ
ಮಂಡ್ಯ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರು ಮೊತ್ತದ ಹಗರಣದ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ದುರ್ಬಳಕೆಯಾಗಿರುವ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಬೇಕು ಎಂದು ಮಂಡ್ಯ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ್ ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮದಿಂದ ಸುಮಾರು 193 ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿಯಿದೆ. ಹೀಗಾಗಿ ಈ ಬಹುಕೋಟಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಾಗೂ ಸಿಬಿಐ ಅಕಾರಿಗಳು ಹಣ ವರ್ಗಾವಣೆ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ತನಿಖಾ ಸಂಸ್ಥೆಗಳು ಕ್ರಮ ವಹಿಸಬೇಕು. ದುರ್ಬಳಕೆಯಾದ ಹಣವನ್ನು ವಸೂಲಿ ಮಾಡಿ, ವಾಪಸ್ ನಿಗಮಕ್ಕೆ ಕಟ್ಟಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ನಾಯಕ ಸಮುದಾಯ ಮತ್ತು ಪರಿಶಿಷ್ಟ ಪಂಗಡದ ಎಲ್ಲ ಸಮುದಾಯದವರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಅರಕೇಶ್, ಉಪಾಧ್ಯಕ್ಷ ಪುಟ್ಟಸ್ವಾಮಿ ನಾಯಕ್, ಖಜಾಂಚಿ ಪ್ರವೀಣ್, ನಿರ್ದೇಶಕರಾದ ಪಾಪಣ್ಣ, ಲೋಕೇಶ್, ಶ್ರೀನಿವಾಸ್ ಹಾಜರಿದ್ದರು.