ಸಾರಾಂಶ
ಹಳಿಯಾಳ: ಪಟ್ಟಣದಲ್ಲಿ ಶನಿವಾರ ನಡೆದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ವರಿಷ್ಠರ ಸಮ್ಮುಖವೇ ಭಿನ್ನಮತವು ಸ್ಫೋಟಗೊಂಡಿದೆ. ಮುಖಂಡರೊಬ್ಬರ ಮೇಲೆ ಹಲ್ಲೆಯಾಗಿದ್ದು, ತಕ್ಷಣ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಅಲ್ಲದೇ ಸದಸ್ಯತ್ವ ಅಭಿಯಾನ ಸಭೆಯನ್ನು ರದ್ದುಗೊಳಿಸಲಾಯಿತು.ಪಟ್ಟಣದ ಗಣೇಶ ಕಲ್ಯಾಣಮಂಟಪದಲ್ಲಿ ಶನಿವಾರ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅವರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿತ್ಯಾನಂದ ಗಾಂವಕರ, ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ ಹಾಗೂ ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸುಧಾಕರ ರೆಡ್ಡಿ ಆಗಮಿಸಿದ್ದರು. ಅವರೊಂದಿಗೆ ಸ್ಥಳೀಯರಾಗಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಸಹ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ನರಸಾನಿ ಬೇಡ: ಶಿವಾಜಿ ನರಸಾನಿ ಅವರನ್ನು ಕಂಡು ತೀವ್ರ ಉದ್ರಿಕ್ತರಾದ ಹಳಿಯಾಳ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿವಾಜಿ ನರಸಾನಿ ಉಪಸ್ಥಿತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರಿಗೆ ಸಭೆಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದರು.
ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಪ್ರಮುಖರಾದ ಮಂಜುನಾಥ ಪಂಡಿತ, ಉದಯ ಹೂಲಿ, ಬಸಣ್ಣ ಕುರುಬಗಟ್ಟಿ, ಶಂಕರ ಗಳಗಿ, ಸಂತಾನ ಸಾವಂತ, ಇಲಿಯಾಸ್ ಬಳಿಗಾರ, ಪಾಂಡು ಪಾಟೀಲ ಮೊದಲಾದವರು ನರಸಾನಿ ಅವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ, ಹಾಗಾಗಿ ಅವರು ಸಭೆಗೆ ಬರಕೂಡದು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ಹೆಗಡೆ, ಪಕ್ಷದ ಶಿಸ್ತು, ನಿಯಮದಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಾನಿ ಅವರನ್ನು ಬಿಟ್ಟು ಸಭೆ ನಡೆಸಲು ಆಗುವುದಿಲ್ಲ. ನಿಮ್ಮ ಆಕ್ಷೇಪಣೆ ಇದ್ದರೆ ಕುಳಿತು ಚರ್ಚಿಸೋಣ ಎಂದು ಮನವಿ ಮಾಡಿದರು. ಆದರೆ ಸ್ಥಳೀಯ ಬಿಜೆಪಿ ಮುಖಂಡರು ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಹಲ್ಲೆ: ಈ ವಾಗ್ವಾದಗಳ ಮಧ್ಯೆ ಜಿಲ್ಲಾ ವರಿಷ್ಠರೊಬ್ಬರು ಆಕ್ಷೇಪಿಸುತ್ತಿರುವ ಮುಖಂಡರನ್ನು ನೀವು ದೇಶಪಾಂಡೆ ಏಜೆಂಟರೆಂದು ಸಂಬೋಧಿಸಿದ್ದರಿಂದ ಕಾರ್ಯಕರ್ತರು ಉದ್ರಿಕ್ತಗೊಂಡರು. ಆಗ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಬಿಜೆಪಿ ಕಾರ್ಯಕರ್ತರೊಬ್ಬರು ಶಿವಾಜಿ ನರಸಾನಿ ಅವರನ್ನು ಎಳೆದಾಡಿ ಹಲ್ಲೆ ಮಾಡಿದರು. ಇದರಿಂದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ, ಜಿಲ್ಲಾಧ್ಯಕ್ಷರನ್ನು ಮತ್ತು ಜಿಲ್ಲಾ ವರಿಷ್ಠರನ್ನು ಬಂದೋಬಸ್ತ್‌ನಲ್ಲಿ ಹೊರಗಡೆ ಕರೆತಂದು ಕಾರಿನಲ್ಲಿ ಕಳುಹಿಸಿದರು.ಸುನೀಲ ಆಕ್ಷೇಪ: ಈ ಘಟನೆ ನಡೆದಾಗ ಮಾಜಿ ಶಾಸಕ ಸುನೀಲ ಹೆಗಡೆ ಸ್ಥಳದಲ್ಲಿ ಇರಲಿಲ್ಲ. ಅವರು ಧಾರವಾಡಕ್ಕೆಹೋಗಿದ್ದರು. ಮಧ್ಯಾಹ್ನದ ಬಳಿಕ ಆಗಮಿಸಿದ ಅವರು, ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪರಿಷ್ಠರೊಂದಿಗೆ ಸಭೆ ನಡೆಸಿದರು. ಆಗ ಸುನೀಲ ಹೆಗಡೆ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಇನ್ನುಳಿದ ಮೂವರು ಬಿಜೆಪಿ ಮುಖಂಡರ ಬಗ್ಗೆ ತಮ್ಮ ಹಾಗೂ ಕಾರ್ಯಕರ್ತರ ಆಕ್ಷೇಪಣೆಗಳನ್ನು ಗಮನಕ್ಕೆ ತಂದು, ಪಕ್ಷ ಬಲಪಡಿಸಲು ಮತ್ತು ಸಂಘಟಿಸಲು ಸ್ಥಳೀಯ ಕಾರ್ಯಕರ್ತರ ಮತ್ತು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಶೀಲಿಸಲು ಆಗ್ರಹಿಸಿದ್ದಾರೆಂದು ಹೇಳಲಾಗುತ್ತಿದೆ. ದೇಶಪಾಂಡೆ ಏಜೆಂಟ್ ಎಂದು ಕರೆದಿದ್ದರಿಂದ ಅಹಿತಕರ ಘಟನೆ: ಸುನೀಲ ಹೆಗಡೆಹಳಿಯಾಳ: ಜಿಲ್ಲಾ ಸಮಿತಿಯ ಕಾರ್ಯದರ್ಶಿಯೊಬ್ಬರು ನಮ್ಮ ಕಾರ್ಯಕರ್ತರನ್ನು ದೇಶಪಾಂಡೆ ಏಜೆಂಟ್ ಎಂದು ಕರೆದಿದ್ದರಿಂದ ಇಂತಹ ಅಹಿತಕರ ಘಟನೆ ನಡೆಯಿತು. ಹಳಿಯಾಳದಲ್ಲಿ ನಡೆದ ಘಟನೆಗೆ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳೆ ಮೂಲ ಕಾರಣ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದ್ದಾರೆ.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಆನಾರೋಗ್ಯ ಹಿನ್ನೆಲೆಯಲ್ಲಿ ನಾನು ಧಾರವಾಡ ಆಸ್ಪತ್ರೆಗೆ ತೆರಳಿದ್ದೆ. ನನ್ನ ಅನುಪಸ್ಥಿತಿಯಲ್ಲಿ ಈ ರೀತಿ ಘಟನೆ ನಡೆದಿದ್ದು, ಈ ಬಗ್ಗೆ ನನಗೆ ನೋವಾಗಿದೆ ಎಂದರು. ಆದರೆ ಜಿಲ್ಲಾಧ್ಯಕ್ಷರು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಸುದ್ದಿಗೋಷ್ಠಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದರು.ವರಿಷ್ಠರಿಂದ ಶಿಸ್ತಿನ ಕ್ರಮ: ಎನ್.ಎಸ್. ಹೆಗಡೆಹಳಿಯಾಳ: ನಮ್ಮದು ಶಿಸ್ತಿನ ಸಿದ್ಧಾಂತದ ಪಕ್ಷ. ನಮ್ಮಲ್ಲಿ ಸಾಮೂಹಿಕ ನಾಯಕತ್ವವಿದೆ. ಆದರೆ ಹಳಿಯಾಳದಲ್ಲಿ ಕೆಲವರು ಪಕ್ಷದ ನಿಯಮಾವಳಿಯನ್ನು ಅರಿತುಕೊಳ್ಳದೇ ನಡೆದುಕೊಂಡಿದ್ದು, ಮನಸ್ಸಿಗೆ ನೋವಾಗಿದೆ. ಇಲ್ಲಿನ ಬೆಳವಣಿಗೆಗಳನ್ನು ರಾಜ್ಯ ಘಟಕದ ಗಮನಕ್ಕೆ ತರಲಿದ್ದು, ಅವರು ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಶಿವಾಜಿ ನರಸಾನಿ ಅವರು ಸಂಘ ಪರಿವಾರದವರು, ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರಿಗೆ ಜಿಲ್ಲಾ ಘಟಕದಲ್ಲಿಯೂ ಜವಾಬ್ದಾರಿಯುತ ಸ್ಥಾನವನ್ನು ವರಿಷ್ಠರು ನೀಡಿದ್ದಾರೆ. ಹೀಗಿರುವಾಗ ಹಳಿಯಾಳ ಮಂಡಳದವರು ಅವರ ವಿರುದ್ಧ ಸಾಕ್ಷಾಧಾರಗಳನ್ನು ನೀಡದೇ ಆರೋಪ ಮಾಡಿದರೆ ಹೇಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು. ದಾಖಲೆ ನೀಡಿದರೆ ನಾವೇ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದರು.