ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ನಿಗಮ ಮಂಡಳಿ ಹಾಗೂ ಖಾಲಿಯಿರುವ ಎಂಎಲ್‌ಸಿ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆಗೆ ಅತ್ತ ರಾಜ್ಯ ಸರ್ಕಾರ ಆರಂಭಿಸುತ್ತಿದ್ದಂತೆ, ಇತ್ತ ಕಾಂಗ್ರೆಸ್‌ನಲ್ಲಿ ಲಾಬಿಯ ಆಟ ಬಲುಜೋರಾಗಿದೆ. ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ನಿಗಮ ಮಂಡಳಿಯಲ್ಲಿ ಸ್ಥಾನ ಕೊಡಿಸಲು ಭಾರೀ ಪ್ರಮಾಣದ ಲಾಬಿ ಶುರುವಾಗಿದೆ.ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಅವರ ಎದುರು ಶಾಸಕರೆಲ್ಲರೂ ಸಚಿವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಂತೆ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಎಲ್ಲ ಶಾಸಕರನ್ನು ಕರೆದು ಮಾತುಕತೆ ನಡೆಸಿ ಸಮಾಧಾನ ಪಡಿಸಲು ಯತ್ನಿಸಿರುವುದುಂಟು.
ಇನ್ನು ಸರ್ಕಾರವೇ ತಮ್ಮದೇ ಪಕ್ಷದ್ದು ಇದ್ದರೂ ಯಾವುದೇ ಹೆಚ್ಚಿನ ಸ್ಥಾನಮಾನ ಸಿಗದೇ ಎರಡನೆಯ ಹಂತದ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಹೀಗಾಗಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಸಮಾಧಾನ ಪಡಿಸುವ ಯತ್ನ ಸಿಎಂ- ಡಿಸಿಎಂ ಅವರಿಂದ ನಡೆಯುತ್ತಿದೆ. ಇದಕ್ಕಾಗಿ ದೆಹಲಿಗೆ ಸಿಎಂ- ಡಿಸಿಎಂ ಹೋಗಿ ಬಂದಿರುವುದುಂಟು. ಆದಕಾರಣ ನಿಗಮ ಮಂಡಳಿಯತ್ತ ಮುಖಂಡರ ಚಿತ್ತ ಹರಿದಿದೆ.ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವರಿಗೆ ಯಾವುದಾದರೂ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಒಂದೆಡೆ ಜೋರಾಗಿದೆ. ಸ್ಥಾನಮಾನ ನೀಡಿಯೇ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವ ಆಗ್ರಹ ಕೇಳಿ ಬಂದಿದ್ದರಿಂದ ಎಲ್ಲಿ ಅಸಮಾಧಾನ ಮತ್ತೆ ಭುಗಿಲೆಳುತ್ತದೆಯೋ ಎಂಬ ಕಾರಣಕ್ಕೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವ ಪ್ರಕ್ರಿಯೆಗೂ ತಾತ್ಕಾಲಿಕ ತಡೆ ನೀಡಲಾಗಿದೆ.
ಪೈಪೋಟಿಗಿಳಿದವರು: ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಕೆಪಿಸಿಸಿ ಎಸ್ಸಿ ಘಟಕದ ಮುಖಂಡರಾಗಿರುವ ಎಫ್.ಎಚ್. ಜಕ್ಕಪ್ಪನವರ, ಎಂಎಲ್‌ಸಿ ಸ್ಥಾನ ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡಿರುವ ಇಸ್ಮಾಯಿಲ್ ತಮಟಗಾರ, ರಾಜಶೇಖರ ಮೆಣಸಿನಕಾಯಿ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ.ಧಾರವಾಡ ಶಾಸಕ ವಿನಯ ಕುಲಕರ್ಣಿ ಜೈಲುಪಾಲಾಗಿದ್ದರೂ ಅವರ ಪರವಾಗಿ ಪ್ರಚಾರ ನಡೆಸಿ ಗೆಲ್ಲಿಸಿಕೊಂಡು ಬಂದಿರುವ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರೇ ಕ್ಷೇತ್ರದ ಜನರ ಸುಖ- ದುಃಖ ಕೇಳುತ್ತಿದ್ದಾರೆ. ಎಷ್ಟೇ ಆದರೂ ಜನರ ಸಮಸ್ಯೆ ಕೇಳಬಹುದೇ ವಿನಃ ಅಧಿಕಾರಿಗಳ ಸಭೆ ನಡೆಸಲು ಅವಕಾಶವಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದರೂ ಅದು ಅನಧಿಕೃತವೇ ಅನಿಸುತ್ತದೆ. ಇದು ಅವರಿಗೆ ಕಷ್ಟವಾಗುತ್ತಿದೆ. ಜತೆಗೆ ಅವರ ವಿರೋಧಿಗಳ ಆಕ್ಷೇಪಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಯಾವುದಾದರೂ ನಿಗಮ ಮಂಡಳಿಗೆ ಅವರನ್ನು ನೇಮಕ ಮಾಡಿಬಿಟ್ಟರೆ ಸರ್ಕಾರಿ ಸಭೆ, ಕಾರ್ಯಕ್ರಮಗಳಿಗೆ ಅವರು ಅಧಿಕೃತ ಆಹ್ವಾನಿತರೇ ಆಗುತ್ತಾರೆ. ಪತಿ ವಿನಯ ಪರವಾಗಿ ಕೆಲಸ ಮಾಡಲು ಸಾಕಷ್ಟು ಅನುಕೂಲವೂ ಆಗುತ್ತದೆ. ಆದಕಾರಣ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಲಾಬಿ ನಡೆದಿದೆ. ಒಂದು ವೇಳೆ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿದರೆ ಉಳಿದವರಿಗೆ ಸಿಗುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ. ಆದರೂ ಹಿರಿಯರಾಗಿರುವ ಜಕ್ಕಪ್ಪನವರ, ಅನಿಲಕುಮಾರ ಪಾಟೀಲ, ಹಳ್ಳೂರಗೆ ನೀಡಬೇಕು ಎಂಬ ಆಗ್ರಹ ಅವರ ಬೆಂಬಲಿಗರಿಂದ ಕೇಳಿ ಬರುತ್ತಿದೆ.
ಇದು ಧಾರವಾಡ ಜಿಲ್ಲೆಯ ಕಥೆಯಾದರೆ ವಿಧಾನಸಭಾ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದ ವೀಕ್ಷಕರಾಗಿದ್ದ ಪ್ರಕಾಶಗೌಡ ಪಾಟೀಲ ಅವರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದರೊಂದಿಗೆ ಇನ್ನು ಹಲವರು ನಿಗಮ ಮಂಡಳಿಯ ಸ್ಥಾನಕ್ಕೆ ಪ್ರಯತ್ನ ನಡೆಸಿರುವುದುಂಟು. ಯಾರ್‍ಯಾರಿಗೆ ಸ್ಥಾನ ಒಲಿಯುತ್ತದೆಯೋ ಕಾಯ್ದು ನೋಡಬೇಕಷ್ಟೇ!.