ನಂದಿನಿ ಉತ್ಪನ್ನ ಗುಣಮಟ್ಟಕ್ಕೆ ಹೆಸರಾಗಿದೆ. ಗುಣಮಟ್ಟದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೆಲ ಖಾಸಗಿ ಕಂಪನಿಗಳು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿವೆ. ಇದರ ಬಗ್ಗೆ ಕೆಎಂಎಫ್ ಗಮನ ಹರಿಸಿದೆ. ನಂದಿನಿ ಉತ್ಪನ್ನಗಳಲ್ಲಿ ಗುಣಮಟ್ಟ ಉಳಿಸಿಕೊಂಡು ರೈತರು ಮತ್ತು ಗ್ರಾಹಕರ ನಂಬಿಕೆ ಉಳಿಸಿಕೊಳ್ಳುತ್ತೇವೆ .

ಕನ್ನಡಪ್ರಭ ವಾರ್ತೆ ರಾಮನಗರ

ನಾಯಕತ್ವ ಬದಲಾವಣೆ ಪಕ್ಷದ ಶಾಸಕರು, ಮುಖ್ಯಮಂತ್ರಿ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಮಿಕವಾಗಿ ನುಡಿದರು.

ತಾಲೂಕಿನ ಬೆಜ್ಜರಹಳ್ಳಿ ಹಾಗೂ ಹಾಗಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ನನ್ನ ವಿಚಾರ ಅಲ್ಲ. ನಂದಿನಿ ಉತ್ಪನ್ನಗಳ ಬಗ್ಗೆ ಏನಾದರೂ ಇದ್ದರೆ ಕೇಳಿ ಹೇಳುತ್ತೇನೆ ಎಂದರು.

ನಾಯಕತ್ವ ಬದಲಾವಣೆ ಆಗದಿದ್ದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾಸಕರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಶಾಸಕರನ್ನೇ ಕೇಳಿ. ನಾನು ರೈತರ ಹಿತ ಕಾಪಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಹಾಲು , ಮೊಸರು, ಮಜ್ಜಿಗೆ ಬಗ್ಗೆ ಏನಾದರೂ ಇದ್ದರೆ ಕೇಳಿ ಹೇಳುತ್ತೇನೆ. ನೀವು (ಮಾಧ್ಯಮದವರು) ಕಡ್ಡಾಯವಾಗಿ ನಂದಿನಿ ಉತ್ಪನ್ನಗಳು ಬಳಕೆ ಮಾಡಿ, ರೈತರನ್ನು ಉಳಿಸಿ ಎಂದು ಹೇಳಿದರು.

14 - 15 ಲಕ್ಷ ಲೀಟರ್ ಹೆಚ್ಚಿಸುವ ಗುರಿ :

ಈ ಜಿಲ್ಲೆಯಲ್ಲಿ ಪ್ರತಿ ನಿತ್ಯ 10 ಲಕ್ಷ ಹಾಲನ್ನು ಶೇಖರಣೆ ಮಾಡಲಾಗುತ್ತಿದೆ. ಇದನ್ನು 14 ರಿಂದ 15 ಲಕ್ಷ ಲೀಟರ್ ಗೆ ಹೆಚ್ಚಳ ಮಾಡಬೇಕೆಂಬುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಒಕ್ಕೂಟದ ವತಿಯಿಂದ ರೈತರಲ್ಲೂ ಸಾಕಷ್ಟು ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಹೈನುಗಾರರು, ಕಾರ್ಮಿಕರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸಾಕಷ್ಟು ಬದಲಾವಣೆಗಳನ್ನು ತರಲು ನಿರ್ಧಾರ ಮಾಡಿದ್ದೇವೆ. ರೈತರು ನಿರಾಶದಾಯಕರಾಗಬಾರದು ಎಂಬ ಉದ್ದೇಶದಿಂದ ಅವರ ನಿರೀಕ್ಷೆಯಂತೆ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ ಎಂದರು.

ಫೀಡ್ಸ್ ಕಂಪನಿ ಬೇಕೆಂಬ ಬೇಡಿಕೆ ಇದೆಯಲ್ಲ ಎಂಬ ಪ್ರಶ್ನೆಗೆ, ಒಕ್ಕೂಟ ವ್ಯಾಪ್ತಿಯ 14 ಕ್ಷೇತ್ರಗಳಲ್ಲಿಯೂ ಈ ಬೇಡಿಕೆ ಇದೆ. ಆದರೆ, ಫೀಡ್ಸ್ ತಯಾರಿಕೆ ಜವಾಬ್ದಾರಿ ಕೆಎಂಎಫ್ ಗೆ ನೀಡಿರುವುದರಿಂದ ಅವರೇ ಪೂರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಕೆಎಂಎಫ್ ನೊಂದಿಗೆ ಸಾಕಷ್ಟು ಚರ್ಚೆ, ಪತ್ರ ವ್ಯವಹಾರಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಂದಿನಿ ಉತ್ಪನ್ನ ಗುಣಮಟ್ಟಕ್ಕೆ ಹೆಸರಾಗಿದೆ. ಗುಣಮಟ್ಟದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೆಲ ಖಾಸಗಿ ಕಂಪನಿಗಳು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿವೆ. ಇದರ ಬಗ್ಗೆ ಕೆಎಂಎಫ್ ಗಮನ ಹರಿಸಿದೆ. ನಂದಿನಿ ಉತ್ಪನ್ನಗಳಲ್ಲಿ ಗುಣಮಟ್ಟ ಉಳಿಸಿಕೊಂಡು ರೈತರು ಮತ್ತು ಗ್ರಾಹಕರ ನಂಬಿಕೆ ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ , ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ(ಶಶಿ), ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಬಮೂಲ್ ನಿರ್ದೇಶಕ ಪಿ.ನಾಗರಾಜು, ಸಂಘದ ಅಧ್ಯಕ್ಷ ಎಚ್.ಎನ್.ಸುಮಿತ್ರ, ಉಪಾಧ್ಯಕ್ಷ ಎಚ್.ಕೃಷ್ಣಪ್ಪ, ನಿರ್ದೇಶಕರಾದ ಡಿ.ಕೃಷ್ಣಪ್ಪ, ಪುಟ್ಟಸ್ವಾಮಿ, ಭಾಗ್ಯಮ್ಮ, ಸೌಭಾಗ್ಯ, ಶಿವಮ್ಮ, ನೀಲಮ್ಮ, ಮೀನಾಕ್ಷಿ, ರಾಮ ಸಂಜಿವೇಗೌಡ, ಶಿವಲಿಂಗಯ್ಯ , ಮುಖ್ಯ ಕಾರ್ಯನಿರ್ವಾಹಕ ಎಸ್.ಬಸವರಾಜು, ಹಾಲು ಪರೀಕ್ಷಕ ಡಿ.ಆನಂದ್ ಮತ್ತಿತರರು ಹಾಜರಿದ್ದರು.