ಬಳ್ಳಾರಿ: ಮಹಾಮಹಿಮ ವರಗುರು ಚರಂತಪ್ಪಜ್ಜ ಮಹಾಸ್ವಾಮಿಗಳ 22ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ಪಾರ್ವತಿನಗರದ ಬಸವಭವನದಲ್ಲಿ ಗುರುವಾರ ಸಂಜೆ ವೇದಮಂತ್ರ ಘೋಷಗಳ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನಂದಿಪುರ ಪುಣ್ಯಕ್ಷೇತ್ರದ ಪ.ಪೂ. ಡಾ.ಮಹೇಶ್ವರಸ್ವಾಮಿ, ಕಮ್ಮರಚೇಡು ಮಠದ ಕಲ್ಯಾಣಸ್ವಾಮಿ ಶ್ರೀ, ಹರಗಿನಡೋಣಿಯ ಸಿದ್ಧಲಿಂಗ ಶಿವಾಚಾರ್ಯ, ಶ್ರೀಧರಗಡ್ಡೆ ಮರಿಕೊಟ್ಟೂರು ದೇವರು, ಜಂಗಮರಹೊಸಹಳ್ಳಿ ಅಜಾತ ಶಂಭುಲಿಂಗ ಶಿವಾಚಾರ್ಯರು ನಂದಿಪುರದ ಚರಂತಪ್ಪಜ್ಜ ಮಹಾಸ್ವಾಮಿಗಳ ಧಾರ್ಮಿಕ ಹಾಗೂ ಸಮಾಜಮುಖಿ ಸೇವಾ ಕೈಂಕರ್ಯಗಳನ್ನು ಸ್ಮರಿಸಿದರು. ನಂದಿಪುರ ಮಠ ಕೃಷಿ ವಲಯದಲ್ಲಿ ಮಾಡುತ್ತಿರುವ ಅಪೂರ್ವ ಸಾಧನೆಯನ್ನು ಬಣ್ಣಿಸಿದರು.ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯ ಶ್ರೀಗುರು ದೊಡ್ಡಬಸವೇಶ್ವರ ಅವತಾರವಾಗಿ ಬಂದು ನೆಲೆಸಿದ ಚರಂತಪ್ಪಜ್ಜನವರು ಎಲ್ಲ ವರ್ಗಗಳ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದರು. ನಾಡಿನ ಅನೇಕ ಜಿಲ್ಲೆಗಳ ಭಕ್ತರು ನಂದಿಪುರಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಚರಂತಪ್ಪಜ್ಜ ಮಹಾಸ್ವಾಮಿಗಳ ಪುಣ್ಯೋತ್ಸವ ಸಮಾರಂಭ ಬಳ್ಳಾರಿ ಭಾಗದ ಭಕ್ತರ ಪರಿಶ್ರಮದಿಂದ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡರಾದ ಪಲ್ಲೇದ ಲಲಿತಮ್ಮನವರು ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ಸ್ಮರಣೋತ್ಸವದ ಮೊದಲ ದಿನ ಮಹಿಳಾ ಸಬಲೀಕರಣ, ಯೋಗಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ಜರುಗಿತು. ನೈಸರ್ಗಿಕ ಚಿಕಿತ್ಸಕಿ ಡಾ.ಎನ್.ಎಲ್.ಸುಮಲತಾ, ಮಹಿಳೆಯರು ಒತ್ತಡದ ಬದುಕಿನಲ್ಲಿ ಆರೋಗ್ಯ ಸುಧಾರಣೆಗೆ ಯೋಗ ಹಾಗೂ ಧ್ಯಾನ ಎಷ್ಟು ಪೂರಕ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್.ವಿ.ಪಾಟೀಲ್ ಗುಂಡೂರವರ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಶತನಾಮಾವಳಿ ಕೃತಿ ಲೋಕಾರ್ಪಣೆಗೊಂಡಿತು. ವೀರಶೈವ ಲಿಂಗಾಯತ ಸಮಾಜದ ಮಹಿಳಾ ಮುಖಂಡರಾದ ಡಾ.ರೇಣುಕಾ ಮಂಜುನಾಥ, ಪಲ್ಲೇದ ಮೈತ್ರಿ, ವಕೀಲೆ ಕೆ.ಎಸ್.ಶಿವಲೀಲ, ಸುಮಾರೆಡ್ಡಿ, ರಾಜಶ್ರೀ ಪಂಚಾಕ್ಷರಪ್ಪ , ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಇದ್ದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ ಡಾ.ಎಚ್.ಎಂ.ಉಮಾ ಹಾಗೂ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ವಚನಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮ ಮುನ್ನ ಅಕ್ಕನ ಬಳಗದಿಂದ ಸಿದ್ಧಾಂತ ಶಿಖಾಮಣಿ ಲಲಿತ ಸಹಸ್ರನಾಮ ಪಾರಾಯಣ ಜರುಗಿತು. ವೀರಶೈವ ಸಮಾಜದ ಹಿರಿಯ ಮುಖಂಡರಾದ ಪಲ್ಲೇದ ಪಂಪಾಪತೆಪ್ಪ, ಮಸೀದಿಪುರ ಸಿದ್ಧರಾಮನಗೌಡ, ಹೊನ್ನನಗೌಡ ಬಲಗುಡ್ಡ, ವಿಭೂತಿ ಎರಿಸ್ವಾಮಿ, ಮದಿರೆ ಕುಮಾರಸ್ವಾಮಿ, ಎರಿಸ್ವಾಮಿ ಬೂದಿಹಾಳುಮಠ ಇದ್ದರು.
ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಚರಂತಪ್ಪಜ್ಜ ಮಹಾಸ್ವಾಮಿಗಳ ಮೂರು ದಿನಗಳ ಸ್ಮರಣೋತ್ಸವ ಕಾರ್ಯಕ್ರಮ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ, ಚಿಕಿತ್ಸೆ, ರಕ್ತದಾನ ಶಿಬಿರ, ಹೃದಯ ತಪಾಸೆ, ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.