ಸವಣೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ರೈತರು ಸಾಂಕೇತಿಕ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಿದರು.ಕೇಂದ್ರ ಸರ್ಕಾರ ಮೆಕ್ಕೆಜೋಳದ ಬೀಜಕ್ಕೆ ಬೆಲೆ ನಿಯಂತ್ರಣ ಕಾಯ್ದೆಯಡಿ ಎಲ್ಲಾ ಕಂಪನಿಗಳು ಒಂದೇ ದರ ನಿಗದಿಪಡಿಸಬೇಕು. ತಾಲೂಕಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಹಣ ತಕ್ಷಣ ಬಿಡುಗಡೆ ಮಾಡಬೇಕು. ರೈತರು ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಸಮಕ್ಷಮ ಅಣೆವಾರಿ ಮಾಡಿದ್ದು, ಅಣೆವಾರಿ ಸರಿಯಾಗಿದ್ದು ಸದರಿಯವರು ನೀರಾವರಿ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಕುಂಟು ನೆಪ ಹೇಳಿಕೊಂಡು, ಬೆಳೆ ವಿಮಾ ಹಣ ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ, ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಮಾಡದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.ರಸಗೊಬ್ಬರದ ಬೆಲೆಯನ್ನು ಪ್ರತಿ 50 ಕೆಜಿ ಚೀಲಕ್ಕೆ 500ರಿಂದ 1000 ರು. ಹೆಚ್ಚಾಗಿದ್ದು ತಕ್ಷಣ ಬೆಲೆ " ಏರಿಕೆಯನ್ನು ನಿಯಂತ್ರಿಸಬೇಕು. ತುಂಗಭದ್ರಾ, ವರದಾ, ಕುಮದ್ವತಿ ಹಾಗೂ ತುಂಗಾ ಮೇಲ್ದಂಡೆ ಕಾಲುವೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಕ್ಷಣ ಪೂರ್ಣಗೊಳಿಸಬೇಕು.
ಹೆಸ್ಕಾಂ ಅಧಿಕಾರಿಗಳು ಅಕ್ರಮ-ಸಕ್ರಮ ಯೋಜನೆಯಡಿ ಹಣ ತುಂಬಿಸಿಕೊಂಡಿದ್ದು ಕಂಬ, ವಯರ್, ಟಿಸಿಗಳನ್ನು ತಕ್ಷಣ ಒದಗಿಸಬೇಕು ಎಂದು ಕೋರಿದರು.ಭೂಮಾಪನ ಇಲಾಖೆಯಲ್ಲಿ ನಕಾಶೆ ಮಾಡುವುದು, ಹದ್ದುಬಸ್ತ್ ಮಾಡಲು ರೈತರ ಹಣ ತುಂಬಿಸಿಕೊಂಡು ಬೆಳೆ ಬಂದಾಗ ರಿಜೆಕ್ಟ್ ಮಾಡಿ ಮತ್ತೆ ಹಣ ತುಂಬಿಸಿಕೊಳ್ಳುವುದನ್ನು ತಕ್ಷಣ ಕೈ ಬಿಡಬೇಕು.ವರದಾ ಬೇಡ್ತಿ ನದಿ ಜೋಡಣೆಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿದ್ದು, ವರದಾ ಬೇಡ್ತಿ ನದಿ ಜೋಡಣೆಯನ್ನು ಶೀಘ್ರದಲ್ಲಿ ಜಾರಿ ಮಾಡಬೇಕು.ತಾಲೂಕಿನ ರೈತರ ಜಮೀನುಗಳಿಗೆ ದಾರಿ(ರಸ್ತೆ) ಇಲ್ಲದೆ ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೂಡಲೆ ಅರ್ಜಿ ಕೊಟ್ಟ ಸವಣೂರ ತಾಲೂಕಿನ ರೈತರ ಜಮೀನುಗಳಿಗೆ ದಾರಿ(ರಸ್ತೆ) ಮಾಡಿಸಲು ಮುಂದಾಗಬೇಕು.ತಾಲೂಕಿನಲ್ಲಿ ಸನ್ 2001ರಲ್ಲಿ ನಡೆದ ನೀರಿನ ಗಲಭೆಯಲ್ಲಿ ಸುಟ್ಟ ದಾಖಲಾತಿಗಳನ್ನು ಸರಿಪಡಿಸಬೇಕು. ಇದರ ಬಗ್ಗೆ, ಅನೇಕ ಬಾರಿ ಹೋರಾಟ ಮಾಡಿದ್ದು ಇರುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಸವಣೂರ ಶಿಗ್ಗಾಂವಿ ಶಾಸಕರು ಸಹಿತಾ ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಇರುತ್ತದೆ. ಕೂಡಲೆ ಇದನ್ನು ಗಂಬೀರವಾಗಿ ಪರಿಗಣಿಸಿ ದಾಖಲಾತಿಗಳನ್ನು ಸರಿಪಡಿಸಬೇಕು.ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯನ್ನು ಟಾಟಾ ಪವರ್ ನಂತಹ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ ರೈತರ ಕೃಷಿ ಪಂಪಸೆಟ್‌ಗಳ ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಲು ಸರ್ಕಾರ ಹುನ್ನಾರ ನಡೆಸುತ್ತಿದ್ದು, ತಕ್ಷಣವೆ ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.ತಹಸೀಲ್ದಾರ್ ರವಿಕುಮಾರ ಕೊರವರ ಅವರು ಮನವಿ ಸ್ವೀಕರಿಸಿ ಮಾತನಾಡಿ, ರೈತರ ಬೇಡಿಕೆ ಈಡೇರಿಸಲು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ರೈತ ಸಂಘದ ಪ್ರಮುಖರಾದ ಅಣ್ಣಪ್ಪ ಗಾಣಗೇರ, ಎಚ್.ಎಂ.ಮುಲ್ಲಾ, ರಮೇಶ ದೊಡ್ಡೂರ, ಅಬ್ದುಲ್ ಬುಡಂದಿ, ಚಿಕ್ಕನಗೌಡ ಶ್ರೀನಿವಾಸ, ಬಸವನಗೌಡ ಅರಳಿಹಳ್ಳಿ, ನಾಗಪ್ಪ ಹಡಪದ, ರಾಮಣ್ಣ ಅಗಸರ, ಫಕ್ಕಿರಪ್ಪ ಭರಮನಾಯ್ಕರ್, ಚಂದ್ರಪ್ಪ ಜೋಗೇರ ಹಾಗೂ ಇತರರು ಇದ್ದರು.ಮೆಕ್ಕೆಜೋಳದ ಬೀಜಕ್ಕೆ ಒಂದೇ ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ರೈತರು ಸಾಂಕೇತಿಕ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.