ಸಾರಾಂಶ
ಸಮಾಜ ಹಾಗೂ ಸಂಘಟನೆಗಳು ಸರ್ಕಾರಿ ಶಾಲೆಯ ಬಲವರ್ಧನೆಗೆ ಒಟ್ಟಾಗಿ ಕೈ ಜೋಡಿಸಬೇಕು
ಗದಗ: ಸರ್ಕಾರಿ ಶಾಲೆಗಳು ಶೈಕ್ಷಣಿಕ ಸಾಧನೆ ಹಾಗೂ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಮನೋಭಾವ, ಧನಾತ್ಮಕ ಚಿಂತನೆಯೊಂದಿಗೆ ನಾಯಕತ್ವದ ಗುಣ ಬೆಳೆಸುತ್ತವೆ, ಇದರಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಗಟ್ಟಿಗೊಳ್ಳುತ್ತವೆ ಎಂದು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕಿ ಸುಧಾ ಬೆನಕಲ್ ಹೇಳಿದರು.
ಅವರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 9ರಲ್ಲಿ ಜಿಲ್ಲಾ ಅಖಿಲ ಭಾರತ ಶರಣ ಸಂಕುಲನದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಶ್ರಾವಣದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು.ನಿವೃತ್ತ ಉಪನ್ಯಾಸಕಿ ಪ್ರೊ. ಪಿ.ಬಿ. ಹಿರೇಮಠ ಮಾತನಾಡಿ, ಸಮಾಜ ಹಾಗೂ ಸಂಘಟನೆಗಳು ಸರ್ಕಾರಿ ಶಾಲೆಯ ಬಲವರ್ಧನೆಗೆ ಒಟ್ಟಾಗಿ ಕೈ ಜೋಡಿಸಬೇಕು, ಇಲ್ಲಿಯ ಗುಣಮಟ್ಟದ ಶಿಕ್ಷಣದ ಬಗೆಗೆ ಪಾಲಕರಿಗೆ ಮನವರಿಕೆ ಮಾಡಬೇಕೆಂದರು.
ಚಿಂತಕಿ ಸುವರ್ಣಾ ಗುರಮ್ಮನವರ ಮಾತನಾಡಿ, ಮಕ್ಕಳು ಒಳ್ಳೆಯ ಮಾತು ಉತ್ತಮ ನಡತೆ ಹಾಗೂ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡು ಮನೆಯ ಹಿರಿಯರ, ಶಾಲಾ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.ಈ ವೇಳೆ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯನಿ ನಿರ್ಮಲಾ ಚಿತ್ತಾಮೂರ ಮಾತನಾಡಿದರು. ಗೀತಾ ದೇವರಮನಿ, ಯಲ್ಲಮ್ಮ ಅರಕೇರಿ ಹಾಗೂ ಪಾಲಕರು, ವಿದ್ಯಾರ್ಥಿಗಳು ಇದ್ದರು. ಸವಿತಾ ಲಕ್ಕುಂಡಿ ಪ್ರಾರ್ಥಿಸಿದರು. ಕವಿತಾ ಬೇಲೇರಿ ಸ್ವಾಗತಿಸಿದರು. ರುಕ್ಮೀಣಿ ಕುರ್ತಕೋಟಿ ನಿರೂಪಿಸಿ, ವಂದಿಸಿದರು.