ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ತಮ್ಮ ಮನೆ, ಆಸ್ತಿ, ಉದ್ಯೋಗ ಹಾಗೂ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಬೇಕಾಯಿತು. ಅನೇಕ ಕುಟುಂಬಗಳು ತಮ್ಮ ಬಂಧುಬಳಗವನ್ನು ಕಳೆದುಕೊಂಡು ನೋವು ಅನುಭವಿಸಿದವು. ಈ ನೋವಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸಾಮಾಜಿಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಇತಿಹಾಸದ ಕಹಿ ಘಟನೆಗಳನ್ನು ಮರೆತುಬಿಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಅವುಗಳಿಂದ ಪಾಠ ಕಲಿತು ದೇಶದ ಏಕತೆ, ಸಮಗ್ರತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಭಾವನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಜನತೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಆಗಸ್ಟ್ ೧೪ರಂದು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ, ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಯಶಸ್ವಿಗೊಂಡಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪಂಜಿನ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಳಿಕ ಸಭಾ ಕಾರ್ಯಕ್ರಮ ಸಿಟಿ ಬಸ್ ನಿಲ್ದಾಣದ ಬಳಿ ನಡೆಯಿತು.. ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಭಕ್ತಿಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ.ಎಂ.ನ ಮುಖ್ಯ ವ್ಯವಸ್ಥಾಪಕ ಡಾ. ಉಮೇಶ್ ವಹಿಸಿದ್ದರು. ನಟ ಸೃಜನ್ ಲೋಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸತೀಶ್ ದಾವಣಗೆರೆ ಅವರು ದಿಕ್ಕೂಚಿ ಭಾಷಣ ಮಾಡಿದರು. ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಸ್ವಾತಂತ್ರ್ಯದ ಸಂಭ್ರಮದ ಜೊತೆಗೆ ೧೯೪೭ರಲ್ಲಿ ನಡೆದ ದೇಶ ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಮಾರಣಹೋಮ, ನರಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ ಹಾಗೂ ಅಪಾರ ಪ್ರಮಾಣದ ಜನರ ಸ್ಥಳಾಂತರದಂತಹ ಕರಾಳ ಘಟನೆಗಳನ್ನೂ ಸ್ಮರಿಸಿದರು.

ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ತಮ್ಮ ಮನೆ, ಆಸ್ತಿ, ಉದ್ಯೋಗ ಹಾಗೂ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಬೇಕಾಯಿತು. ಅನೇಕ ಕುಟುಂಬಗಳು ತಮ್ಮ ಬಂಧುಬಳಗವನ್ನು ಕಳೆದುಕೊಂಡು ನೋವು ಅನುಭವಿಸಿದವು. ಈ ನೋವಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸಾಮಾಜಿಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಇತಿಹಾಸದ ಕಹಿ ಘಟನೆಗಳನ್ನು ಮರೆತುಬಿಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಅವುಗಳಿಂದ ಪಾಠ ಕಲಿತು ದೇಶದ ಏಕತೆ, ಸಮಗ್ರತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಭಾವನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಜನತೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯವು ಕೇವಲ ಒಂದೇ ರೀತಿಯ ಹೋರಾಟದ ಫಲವಲ್ಲ. ಸ್ವಾತಂತ್ರ್ಯಕ್ಕಾಗಿ ವಿವಿಧ ಹಂತಗಳಲ್ಲಿ ಅನೇಕ ಕ್ರಾಂತಿಕಾರಿಗಳು, ಹೋರಾಟಗಾರರು ಹಾಗೂ ದೇಶಭಕ್ತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ತ್ಯಾಗ, ಹೋರಾಟ ಮತ್ತು ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕೊಡುಗೆಯನ್ನು ಯುವಜನತೆ ಅರಿತುಕೊಳ್ಳಬೇಕು. ದೇಶದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳುವುದರ ಜತೆಗೆ ರಾಷ್ಟ್ರದ ಏಕತೆ ಮತ್ತು ಅಖಂಡತೆಗೆ ಬದ್ಧರಾಗಬೇಕು. ಈ ಉದ್ದೇಶದಿಂದ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಖಂಡ ಭಾರತದ ಸಂಕಲ್ಪ ಮಾಡೋಣ, ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡೋಣ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಂಘಟನೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ. ಗೌಡ, ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಲೋಕೇಶ್, ಸಮಾಜ ಸೇವಕ ಕಂಚಮಾರನಹಳ್ಳಿ ಕಾಂತರಾಜು, ಶಿವಾಜಿ, ಚೇತನ್, ಪುನೀತ್, ಶಶಾಂಕ್, ವೈಶಾಕ್, ಮಹದೇಶ್, ಅಖಿಲ ಭಾರತ ಲಿಂಗಾಯಿತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್‌ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು.