ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಪ್ರತಿಭಾನ್ವಿತ ಸರ್ಕಾರಿ ನೌಕರರ ಮಕ್ಕಳ ಪುರಸ್ಕಾರ ಸಮಾರಂಭ ನಡೆಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೊಪ್ಪಳ ಜಿಲ್ಲೆಯ 220 ಹಾಗೂ ವಿಜಯನಗರ ಜಿಲ್ಲೆಯ 206 ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ತಲಾ ₹2 ಸಾವಿರ ನಗದು ನೀಡಿ ಗೌರವಿಸಲಾಯಿತು.
ಕೊಪ್ಪಳ: ಪ್ರತಿಯೊಬ್ಬರ ಬದುಕಿನಲ್ಲಿ ಪುರಸ್ಕಾರ ಮತ್ತು ತಿರಸ್ಕಾರ ಎರಡೂ ಸಹಜ. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಧೈರ್ಯದಿಂದ ಎದುರಿಸಿ, ಆರೋಗ್ಯಕರ ಹಾಗೂ ಸಂತೋಷದ ಬದುಕು ನಡೆಸುವುದನ್ನು ಮಕ್ಕಳು ಕಲಿಯಬೇಕು ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಪ್ರತಿಭಾನ್ವಿತ ಸರ್ಕಾರಿ ನೌಕರರ ಮಕ್ಕಳ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪೋಷಕರು ಸಾವಿನಂಚಿನಲ್ಲಿದ್ದಾಗ ವೈದ್ಯರನ್ನು ಕರೆಸುವ ಮಕ್ಕಳಾಗಬೇಕು; ಆಸ್ತಿಗಾಗಿ ವಕೀಲರನ್ನು ಕರೆಸುವ ಮಕ್ಕಳಾಗಬಾರದು. ಬದುಕಿನಲ್ಲಿ ನೀಟ್ ಪರೀಕ್ಷೆ ಬರೆಯುವುದಕ್ಕಿಂತ ನೀಟಾಗಿ ಬದುಕುವುದನ್ನು ಕಲಿಯಬೇಕು. ಸಂಪತ್ತು ಗಳಿಸುವುದಕ್ಕಿಂತ ಅದನ್ನು ಬಳಸುವ ಸಂಸ್ಕಾರ ಮುಖ್ಯ ಎಂದು ಕಿವಿಮಾತು ಹೇಳಿದರು.ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಆರೋಗ್ಯ ಹಾಗೂ ಜೀವನ ಗುಣಮಟ್ಟ ಸುಧಾರಿಸಬೇಕಿದೆ ಎಂದರು. ಇಂದಿನ ಮಕ್ಕಳು ಓದಿನಲ್ಲಿ ಮುಂದಿದ್ದರೂ ಭಾವನಾತ್ಮಕವಾಗಿ ದುರ್ಬಲರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಗುರಿ ಮತ್ತು ಗುರುವಿನ ನಡುವಿನ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ. ಜ್ಞಾನದ ಜತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು. ಪೋಷಕರು ಮಕ್ಕಳಲ್ಲಿ ಕಷ್ಟ-ಸುಖದ ಅರಿವು ಮೂಡಿಸಬೇಕು ಹಾಗೂ ಸಮಾಜದ ವಿಶ್ವಾಸ ಗಳಿಸುವ ವ್ಯಕ್ತಿತ್ವ ಬೆಳೆಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೊಪ್ಪಳ ಜಿಲ್ಲೆಯ 220 ಹಾಗೂ ವಿಜಯನಗರ ಜಿಲ್ಲೆಯ 206 ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ತಲಾ ₹2 ಸಾವಿರ ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜ, ವಿಜಯನಗರ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಮೊಹಮ್ಮದ್ ಆಸೀಫ್ ಅಲಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.