ಪರಭಾಷಿಕರಿಗೆ ಕನ್ನಡ ಕಲಿಸಲು ಧಾರವಾಡದಲ್ಲಿ ಕಲಿಕಾ ಕೇಂದ್ರ

| Published : Jul 10 2025, 12:45 AM IST

ಪರಭಾಷಿಕರಿಗೆ ಕನ್ನಡ ಕಲಿಸಲು ಧಾರವಾಡದಲ್ಲಿ ಕಲಿಕಾ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಬ್ಯಾಂಕ್, ಅಂಚೆ ಕಚೇರಿ, ಕೈಗಾರಿಕೆ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೇರೆ ರಾಜ್ಯಗಳ ಉದ್ಯೋಗಿಗಳು ಕನ್ನಡ ಕಲಿಯಬೇಕು. ಅವರ ಆಸಕ್ತಿಗೆ ಅನುಗುಣವಾಗಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ತರಬೇತಿ ಅವಧಿಯ ಮೂರು ತಿಂಗಳಲ್ಲಿ ಉದ್ಯೋಗಿಗೆ ಕನ್ನಡ ಮಾತನಾಡಲು ಸಾಮಾನ್ಯ ಕನ್ನಡ ಹೇಳಿಕೊಡಲಾಗುತ್ತದೆ.

ಧಾರವಾಡ: ಹೊರರಾಜ್ಯದ ಉದ್ಯೋಗಿಗಳ ಕನ್ನಡ ಕಲಿಕೆಗಾಗಿ ಧಾರವಾಡದಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧವಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಬುಧವಾರ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಬ್ಯಾಂಕ್, ಅಂಚೆ ಕಚೇರಿ, ಕೈಗಾರಿಕೆ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೇರೆ ರಾಜ್ಯಗಳ ಉದ್ಯೋಗಿಗಳು ಕನ್ನಡ ಕಲಿಯಬೇಕು. ಅವರ ಆಸಕ್ತಿಗೆ ಅನುಗುಣವಾಗಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ತರಬೇತಿ ಅವಧಿಯ ಮೂರು ತಿಂಗಳಲ್ಲಿ ಉದ್ಯೋಗಿಗೆ ಕನ್ನಡ ಮಾತನಾಡಲು ಸಾಮಾನ್ಯ ಕನ್ನಡ ಹೇಳಿಕೊಡಲಾಗುತ್ತದೆ. ಅಗತ್ಯವಿದ್ದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕನ್ನಡ ಕಲಿಕಾ ಕೇಂದ್ರವನ್ನು ಪ್ರಾಧಿಕಾರದಿಂದ ತೆರೆಯಲಾಗುತ್ತದೆ ಎಂದು ಭರವಸೆ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಗ್ರಾಹಕರಿಗೆ ಭಾಷೆ ಸಮಸ್ಯೆ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಸ್ಥಳೀಯ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ, ವಿಶೇಷವಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದೆ ಎಂದ ಅವರು, ಕನ್ನಡಕ್ಕಾಗಿ ಹೋರಾಟ ನಡೆಸಿದವರ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತವು ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದರು. ಗೋಕಾಕ ಚಳುವಳಿಯ ಸ್ಮರಣೆಗಾಗಿ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಹತ್ತಿರ ಇರುವ ಸರ್ಕಲ್‌ನಲ್ಲಿ ಡಾ. ರಾಜಕುಮಾರ ಅವರ ಸ್ಮಾರಕವನ್ನು ನಿರ್ಮಿಸಬೇಕು ಎಂಬುದು ಕನ್ನಡಪರ ಹೋರಾಟಗಾರರ ಬೇಡಿಕೆಯಾಗಿದೆ. ಈ ಕುರಿತು ಸರ್ಕಾರಕ್ಕೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮಹಾನಗರ ಪಾಲಿಕೆಯಿಂದ ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ಪತ್ರ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲು ಮತ್ತು ತಮ್ಮ ಅಂಗಡಿಯ ನಾಮಫಲಕಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಸ್ಥಳದಲ್ಲಿ ಕನ್ನಡ ಬಳಸಲು ಸೂಚಿಸಲಾಗುತ್ತದೆ. ಈ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಲು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮುಂದಿನ ತಿಂಗಳು ಈ ಕುರಿತು ಕನ್ನಡ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ವಿವಿಧ ಕಚೇರಿ ಹಾಗೂ ಉದ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರರಾಜ್ಯದ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಪ್ರಾಧಿಕಾರವು ಜಿಲ್ಲೆಯಲ್ಲಿ ಕಲಿಕಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಿದ್ದಲ್ಲಿ, ಜಿಲ್ಲಾಡಳಿತವು ಕ್ರಮವಹಿಸಿ, ಶೀಘ್ರದಲ್ಲಿ ಕನ್ನಡ ಕಲಿಯುವವರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಾಯಿಸುವ ವಿವಾಹಗಳಿಗೆ ನೀಡುವ ವಿವಾಹ ಪ್ರಮಾಣ ಪತ್ರವನ್ನು ಆಧಾರ ಕಾರ್ಡ್‌ದಲ್ಲಿ ಇರುವಂತೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯನ್ನು ಬಳಸುವ ಕುರಿತು ಹೊರ ರಾಜ್ಯದವರಿಂದ ಮನವಿಗಳು ಸಲ್ಲಿಕೆಯಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಡಾ. ಸಂತೋಷ ಹಾನಗಲ್, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಸರ್ಕಾರದ ಆದೇಶದ ಪ್ರಕಾರ ಎಲ್ಲ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು. ಆದರೆ, ಅವಳಿ ನಗರದಲ್ಲಿ ಸರ್ಕಾರದ ಈ ನಿಯಮ ಸರಿಯಾಗಿ ಪಾಲನೆಯಾಗಿಲ್ಲ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ಈ ಕುರಿತು ಕ್ರಮವಹಿಸಿ, ಎಲ್ಲ ಪ್ರಕಾರದ ಅಂಗಡಿ, ಮುಗ್ಗಟ್ಟುಗಳ ಹಾಗೂ ಇತರ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಅಕ್ಷರಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.