ಡಯಟ್‌ನಲ್ಲಿ ಸೋಮವಾರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಡಾ.ಆಕಾಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಟುವಟಿಕೆ ಅಧಾರಿತ ಬೋಧನೆಯಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಹೇಳಿದರು.

ಡಯಟ್‌ನಲ್ಲಿ ಸೋಮವಾರ ಜಿಲ್ಲೆಯ ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗನವಾಡಿ ಶಿಕ್ಷಕರಿಗೆ ಹೆಚ್ಚು ಜವಾಬ್ದಾರಿ ಇದ್ದು 6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಾರೆ. ಚಿತ್ರದುರ್ಗದಲ್ಲಿ 137 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಗುವುದು.

ಈ ತರಗತಿಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಮಕ್ಕಳಿಗೆ ಕಲಿಸುವುದು ಮೂಲ ಜವಾಬ್ದಾರಿ. ಕಲಿಕೆಗೆ ಆದ್ಯತೆ ನೀಡಬೇಕು. ಸರ್ಕಾರದ ವತಿಯಿಂದ ಚಿಲಿಪಿಲಿ, ಚಿಲಿಪಿಲಿ ಪುಸ್ತಕಗಳನ್ನು ಒದಗಿಸಲಾಗಿದೆ. ಈ ಪುಸ್ತಕವನ್ನು ಮತ್ತು ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬೇಕು. ಚಟುವಟಿಕೆ, ಕಲಿಕೋಪಕರಣಗಳನ್ನು ಬಳಸಿ ಬೋಧಿಸಲು ತರಬೇತಿಗಳು ಅಗತ್ಯ. ಎಪಿಎಫ್ (ಅಜೀಂ ಪ್ರೇಮ್‌ಜಿ ಫೌಂಢೇಶನ್) ವತಿಯಿಂದ ಉತ್ತಮವಾದ ತರಬೇತಿ ನೀಡಲಾಗುತ್ತಿದ್ದು ಶಿಕ್ಷಕರು ಸಂತಸದಾಯಕವಾಗಿ ತರಬೇತಿಯಲ್ಲಿ ಪಾಲ್ಗೊಂಡು ತರಗತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ. ಮನೆಯಲ್ಲಿ ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ಸಲಹುವ ರೀತಿಯಲ್ಲಿ ಶಿಕ್ಷಕರು ಮಾತೃ ಸಂವೇದನೆ ಬೆಳೆಸಿಕೊಂಡು ಕಾರ್ಯ ನಿರ್ವಹಿಸಬೇಕು. ಮಗುವಿನ ಬೌಧ್ಧಿಕ, ಮಾನಸಿಕ ಬೆಳವಣಿಗೆಗೆ ಸ್ಫೂರ್ತಿ ನೀಡಬೇಕು ಎಂದರು.

ನೋಡಲ್ ಅಧಿಕಾರಿ ಎಲ್.ರೇವಣ್ಣ ಮಾತನಾಡಿ, ಪೂರ್ವ ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಭಾಷೆ ಮತ್ತು ಸಂಖ್ಯಾಜ್ಞಾನದ ಪರಿಕಲ್ಪನೆಗಳನ್ನು ಬೆಳೆಸಬೇಕು. ಇದರಿಂದ ಮಕ್ಕಳು ಮುಂದಿನ ತರಗತಿಯಲ್ಲಿ ಸುಲಭವಾಗಿ ಕಲಿಯಲು ಸಹಾಯವಾಗತ್ತದೆ ಎಂದು ತಿಳಿಸಿದರು.

ಉಪ ಪ್ರಾಚಾರ್ಯ ಎಸ್.ನಾಗಭೂಷಣ್, ಉಪನ್ಯಾಸಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಎಪಿಎಫ್‌ನ ಪುನೀತ್. ಸುಮಂಗಳ, ಅನ್ನಪೂರ್ಣ, ಹರೀಶ, ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್, ಬಿ.ಎಸ್. ನಿತ್ಯಾನಂದ ಮತ್ತು ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಕರು ಇದ್ದರು.