ಸಮ್ಯಕ ಸಂಗೀತ ಗುರುಕುಲದಲ್ಲಿ ಗುರುವಂದನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮಣ್ಕುಳಿಯ ಸಮ್ಯಕ್ ಸಂಗೀತ ಗುರುಕುಲದಲ್ಲಿ ಗುರುವಂದನೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಿತು.

ಸಂಗೀತ, ತಬಲಾ ಹಾಗೂ ಹಾರ್ಮೋನಿಯಂ ವಿದ್ಯಾರ್ಥಿಗಳು ಗುರು ಪೂರ್ಣಿಮೆಯ ನಿಮಿತ್ತ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಂಗೀತ ಗುರು ಗಜಾನನ ಹೆಬ್ಬಾರ್ ಮಾತನಾಡಿ, ಸಂಗೀತ ಕಲಿಕೆಯು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಹಿಂದೆ ಗುರುಗಳಿಂದ ಕಠಿಣ ಪರಿಶ್ರಮ ಪಟ್ಟು ಕಲಿಯುತ್ತಿದ್ದರೆ ಇಂದು ಕಲಿಕೆಯ ಕುರಿತು ನಿರ್ದಿಷ್ಟವಾದ ಗುರಿ ಇಲ್ಲವಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಅಲ್ಪ ಸ್ವಲ್ಪ ಕಲಿತ ಆನಂತರ ಸಂಗೀತ ಕಲಿಕೆಯನ್ನು ನಿಲ್ಲಿಸುತ್ತಿರುವುದು ಸರಿಯಲ್ಲ. ಕಲಿಕೆಯು ನಿರಂತರವಾದ ಪ್ರಕ್ರಿಯೆಯಾಗಿದ್ದು, ನಾವು ಕೂಡಾ ಸಂಗೀತದ ವಿದ್ಯಾರ್ಥಿಗಳು ಎಂದರು.

ತಬಲಾ ಗುರು ಅಜಯ್ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಸಂಗೀತಾಭ್ಯಾಸವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದಲ್ಲಿ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಹೇಳಿದರು.


ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಸಮ್ಯಕ್ ಗುರುಕುಲ ಸ್ಥಾಪಿಸುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಗುರುಗಳಿಗೆ ಸದಾ ಗೌರವ ಸಲ್ಲಿಸುವಂತಾಗಬೇಕು. ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರವನ್ನು ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು ಎಂದು ಹೇಳಿದರು. ವಿದ್ಯಾರ್ಥಿಗಳು ಸಂಗೀತ ಗುರುಗಳಾದ ಗಜಾನನ ಹೆಬ್ಬಾರ್, ಹಾರ್ಮೋನಿಯಂ, ತಬಲಾ ಗುರುಗಳಾದ ಅಜಯ್ ಹೆಗಡೆ ಹಾಗೂ ತಬಲಾ ಗುರುಗಳಾದ ಶ್ರೀರಕ್ಷಾ ಗಜಾನನ ಹೆಬ್ಬಾರ್ ಅವರನ್ನು ಗೌರವಿಸಿದರು.

ದೇವಿಮನೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ನಾಯ್ಕ ಗುರುಪೂರ್ಣಿಮೆ ಮಹತ್ವ ಸಾರಿದರು. ಸಂಗೀತ, ತಬಲಾ ಮತ್ತು ಹಾರ್ಮೋನಿಯಂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಅರ್ಚನಾ ಹೆಗಡೆ ಹಾಗೂ ಅಪರ್ಣಾ ಕಾರ್ಯಕ್ರಮ ನಿರ್ವಹಿಸಿದರು. ಕೇಶವ ಮೊಗೇರ ವಂದಿಸಿದರು. ಆನಂತರ ಸಂಗೀತ ಗುರುಗಳು ಹಾಗೂ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.