ಸಾರಾಂಶ
ಮಂಗಳೂರು: ಸಾರ್ವಜನಿಕರೊಂದಿಗೆ ಪೊಲೀಸರು ಹೆಚ್ಚಾಗಿ ವ್ಯವಹರಿಸ ಬೇಕಾಗಿರುವುದರಿಂದ ಆಯಾ ಪ್ರದೇಶದ ಭಾಷೆಯನ್ನು ಕಲಿಯುವುದು ಅಗತ್ಯ. ಇದರಿಂದ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಕರ್ತವ್ಯ ನಿರ್ವಹಣೆಗೂ ಸಾಕಷ್ಟು ಸುಲಭವಾಗಲಿದೆ ಎಂದು ನಗರ ಪೊಲೀಸ್ ಕಮಿಷನರ್ ಮತ್ತು ವಿಶೇಷ ಕಾರ್ಯಪಡೆ ಡಿಐಜಿಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶೇಷ ಕಾರ್ಯಪಡೆ ಮಂಗಳೂರು (ಎಸ್‌ಎಎಫ್) ವತಿಯಿಂದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿಶೇಷ ಕಾರ್ಯಪಡೆ ಸಿಬ್ಬಂದಿಗಳಿಗಾಗಿ ಆಯೋಜಿಸಿದ 20 ದಿನಗಳ ತುಳು ಕಲಿಕಾ ಶಿಬಿರ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ದ.ಕ. ಮತ್ತು ಉಡುಪಿ ಭಾಗದಲ್ಲಿ ಸ್ಥಳೀಯ ಭಾಷೆಗಳು ಬಳಕೆ ಆಗುವುದರಿಂದ ಪೊಲೀಸರಿಗೂ ಕೆಲಸ ಮಾಡಲು ಸಮಸ್ಯೆಯಾಗುತ್ತದೆ. ನಾವು ನಮ್ಮವರು ಎನ್ನುವ ಭಾವನೆ ಬರುವುದಿಲ್ಲ. ಸ್ಥಳೀಯರು ಕೂಡಾ ನಮ್ಮವರು ಎಂದು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಕಲಿಯುವುದರಿಂದ ಸಂಸ್ಕೃತಿಯ ಪರಿಚಯವೂ ಆಗಿ, ನಾವೂ ಅವರೊಳಗೆ ಒಬ್ಬರಾಗುತ್ತೇವೆ. ಇದು ಅಪರಾಧ ತನಿಖೆಯ ಸಂದರ್ಭದಲ್ಲೂ ಇಲಾಖೆಗೆ ಸಹಾಯವಾಗುತ್ತದೆ ಎಂದರು.ದ.ಕ. ಜಿಲ್ಲೆಯಲ್ಲಿ ಶೇ. 98 ರಷ್ಟು ಮಂದಿ ಅವರ ಪಾಡಿಗೆ ಅವರು ಇದ್ದಾರೆ. ಏನೇ ಸಮಸ್ಯೆ ಬಂದರೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶೇ.2ರಲ್ಲಿ ಶೇ.1ರಷ್ಟು ಮಂದಿ ಅಪರಾಧಿಕ ಮನಸ್ಥಿತಿಯವರು. ಇವರು ಶೇ.98 ರಷ್ಟಿರುವ ಜನರನ್ನು ಹೆದರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದ ಶೇ.1 ಪೊಲೀಸರಾಗಿದ್ದು, ಅವರು ಶೇ.98 ರಷ್ಟು ಮಂದಿ ಧೈರ್ಯ ಹೇಳುವ ಕೆಲಸ ಮಾಡಬೇಕು. ಅವರಿಗೆ ಅವರದೇ ಆದ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೆ. ಅವರ ನೋವು ತಿಳಿಯಬೇಕಾದರೆ ನಾವು ಅವರ ಭಾಷೆ ಕಲಿಯಬೇಕು ಎಂದರು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿ, ತುಳು ಕಲಿಯುವುದರಿಂದ ದ.ಕ. ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡಲು ನೆರವಾಗುತ್ತದೆ. ತುಳು ಕಲಿತು ತುಳುವಿನಲ್ಲಿ ವ್ಯವಹರಿಸುವುದರಿಂದ ತುಳುವಿಗೆ ಇನ್ನಷ್ಟು ಒತ್ತು ದೊರೆಯುವಂತಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿಕಾಪಿಕಾಡ್ ಮಾತನಾಡಿ, ಪುಸ್ತಕ ನೋಡಿ ಓದಿ ಭಾಷೆ ಕಲಿಯಲು ಸಾಧ್ಯವಿಲ್ಲ. ಬೇರೆಯವರು ಮಾತನಾಡುವುದನ್ನು ಕೇಳಿ ಕಲಿಯಬೇಕು. ಭಾಷೆ ಕಲಿಯುವುದರಿಂದ ಊರಿನ ಸಾಂಸ್ಕೃತಿಕ ಬದುಕಿನ ಪರಿಚಯವೂ ಆಗಲಿದೆ. ಕಮಿಷನರ್‌ರ ಅಭಿಲಾಷೆಯಂತೆ ಎಸ್‌ಎಎಫ್ ಸಿಬ್ಬಂದಿಗೆ ತುಳು ಕಲಿಕಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ವಿಶೇಷ ಕಾರ್ಯಪಡೆ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಡಿಸಿಪಿ ಮಿಥುನ್ ಎಚ್.ಎನ್. ಇದ್ದರು.ಎಎಸ್‌ಎಫ್ ಸಿಬ್ಬಂದಿ ರವಿಪ್ರಕಾಶ್ ಸ್ವಾಗತಿಸಿ, ವಂದಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ನಾಗೇಶ್ ಉದ್ಯಾವರ ನಿರೂಪಿಸಿದರು.ಎಸ್‌ಎಎಫ್‌ನ ಉಡುಪಿ ಮತ್ತು ಮಂಗಳೂರು ಕಂಪೆನಿಯ ಸುಮಾರು 150 ಮಂದಿ ಸಿಬ್ಬಂದಿ, ಅಧಿಕಾರಿಗಳಿಗೆ ತುಳು ಕಲಿಕಾ ಕಾರ್ಯಾಗಾರ ನಡೆಯುತ್ತಿದೆ.
;Resize=(128,128))
;Resize=(128,128))