ಜಾತಿಭೇದ ಬಿಟ್ಟು ಸೌಹಾರ್ದದಿಂದ ಬಾಳಬೇಕು

| Published : Jan 12 2025, 01:17 AM IST

ಸಾರಾಂಶ

ಇನ್ನು ಮುಂದೆ ನಿಮ್ಮ ಗ್ರಾಮದಲ್ಲಿಯೇ ಆಗಲಿ, ಎಲ್ಲಾದರೂ ಆಗಲಿ ಈ ರೀತಿಯ ಘಟನೆಗಳು ನಡೆಯಬಾರದು. ಯಾವುದೇ ಸಂಘರ್ಷಕ್ಕೆ ಅವಕಾಶಕೊಡದೇ ಗ್ರಾಮದಲ್ಲಿ ಶಾಂತಿಯುತವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ನೆಮ್ಮದಿಯಾಗಿ ಬದುಕಬೇಕು. ಹಾಗಾಗಿ ಈ ಘಟನೆ ಇಲ್ಲಿಗೆ ಬಿಟ್ಟು ಮತ್ತೆ ಮರುಕಳಿಸದಂತೆ ಮಾದರಿ ಗ್ರಾಮವಾಗಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ತೊಂಡೇಬಾವಿ ಹೋಬಳಿ, ಬೆಳಚಿಕನಹಳ್ಳಿ ಗ್ರಾಮದಲ್ಲಿ ದಲಿತ ಮುಖಂಡ ಗೋಪಾಲ್ ಎಂಬುವರನ್ನು ಶುಕ್ರವಾರ ದೇವಸ್ಥಾನದೊಳಕ್ಕೆ ಬಿಡಲು ನಿರಾಕರಿಸಿ, ದೇವಾಲಯದಿಂದ ಹೊರತಳ್ಳಿದ ಘಟನೆ ಹಿನ್ನೆಲೆಯಲ್ಲಿ ಶನಿವಾರ ಗ್ರಾಮದಲ್ಲಿ ಶಾಂತಿಸಭೆ ನಡೆಸಲಾಯಿತು. ತಹಸಿಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಘಟನೆ ಬಗ್ಗೆ ಗ್ರಾಮದ ಮುಖಂಡರನ್ನು ವಿಚಾರಿಸಿದಾಗ, ಶುಕ್ರವಾರ ನಡೆಯಬಾರದ ಘಟನೆ ನಡೆದಿದೆ ಅವರಿಗೆ ತೊಂದರೆ ಮಾಡಬೇಕೆಂಬ ಉದ್ದೇಶ ಇರಲಿಲ್ಲ ಅಚಾತುರ್ಯವಾಗಿ ಘಟನೆ ನಡೆದು ಹೋಗಿದೆ, ನಾವೆಲ್ಲರೂ ಸಹ ಅವರಿಗೆ ತಿಳಿಹೇಳಿದ್ದೇವೆ ಎಂದು ತಿಳಿಸಿದ್ದಾರೆಂದು ಸಭೆಗೆ ಮಾಹಿತಿ ನೀಡಿದರು.

ಮಾದರಿ ಗ್ರಾಮವಾಗಲಿ

ಅನ್ಯಾಯವಾದವರಿಗೆ ನ್ಯಾಯಕೊಡಿ ಎಂದು ಇಲ್ಲಿನ ದಲಿತ ಮುಖಂಡರುಗಳು ಹೋರಾಡಿದ್ದಾರೆ. ಆದರೆ ಅವರ ಸ್ವಾರ್ಥಕ್ಕಾಗಿ ಯಾವತ್ತು ಹೋರಾಟಗಳು ಮಾಡಿಲ್ಲ , ಹಾಗಾಗಿ ಈ ಘಟನೆ ಇಲ್ಲಿಗೆ ಬಿಟ್ಟು ಮತ್ತೆ ಮರುಕಳಿಸದಂತೆ ಮಾದರಿ ಗ್ರಾಮವಾಗಬೇಕು ಎಂದು ತಹಸೀಲ್ದಾರ್‌ ಮನವಿ ಮಾಡಿದರು.

ಡಿವೈಎಸ್ಪಿ ಶಿವಕುಮಾರ್ ಮಾತನಾಡಿ, ಇನ್ನು ಮುಂದೆ ನಿಮ್ಮ ಗ್ರಾಮದಲ್ಲಿಯೇ ಆಗಲಿ, ಎಲ್ಲಾದರೂ ಆಗಲಿ ಈ ರೀತಿಯ ಘಟನೆಗಳು ನಡೆಯಬಾರದು. ಯಾವುದೇ ಸಂಘರ್ಷಕ್ಕೆ ಅವಕಾಶಕೊಡದೇ ಗ್ರಾಮದಲ್ಲಿ ಶಾಂತಿಯುತವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ನೆಮ್ಮದಿಯಾಗಿ ಬದುಕಬೇಕು ಎಂದು ಹೇಳಿದರು.ಸೌಹಾರ್ದತೆಯಿಂದ ಬದುಕಬೇಕು

ಕೆಡಿಎಸ್ಎಸ್ ರಾಜ್ಯ ಸಂಚಾಲಕ ಗಂಗಾಧರಪ್ಪ ಮಾತನಾಡಿ, ದೇವರಿಗೆ ಎಲ್ಲರೂ ಬೇಕು ದೇವರಿಗೆ ಯಾವುದೇ ಜಾತಿ ಧರ್ಮ ಇಲ್ಲ ಎಲ್ಲವೂ ಮನುಷ್ಯರಾದ ನಾವು ಇಟ್ಟುಕೊಂಡು ಇಂತಹ ಘಟನೆಗಳು ಸಂಭವಿಸುತ್ತವೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇಂತಹ ಘಟನೆಗಳು ಮುಂದುವರೆಯಬಾರದು ಎಲ್ಲರೂ ಸೌಹಾರ್ದತೆಯಿಂದ ಬದುಕುವಂತಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ ಸತ್ಯನಾರಾಯಣ, ಮಂಚೇನಹಳ್ಳಿ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಮೂರ್ತಿ, ಕೋಚಿಮೂಲ್ ನಿರ್ದೇಶಕ ಜೆ.ಕಾಂತರಾಜು, ಮುಖಂಡರಾದ ಗಿರೀಶ್ ರೆಡ್ಡಿ, ದೇವಸ್ಥಾನದ ಅಧ್ಯಕ್ಷ ಶ್ರೀರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮುನಿಯಪ್ಪ, ನಾಗಾರ್ಜುನ, ವಕೀಲ ಜಿ.ನರಸಿಂಹಮೂರ್ತಿ, ಪೃಥ್ವಿ, ರವಿಕುಮಾರ್, ಜಿ.ಸೋಮಯ್ಯ, ದಲಿತ ಸಂಘರ್ಷ ಸಮಿತಿಯ ಚಿಕ್ಕ ನರಸಿಂಹಪ್ಪ, ವರವಣಿ ನರಸಿಂಹಮೂರ್ತಿ, ಅಶೋಕ್, ವೆಂಕಟೇಶಪ್ಪ, ಕದಿರಪ್ಪ, ಶ್ರೀನಿವಾಸ, ಬಾಲಪ್ಪ ಮತ್ತಿತರರು ಹಾಜರಿದ್ದರು.