ಹೊಸ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಗೆ ಸಂಪೂರ್ಣ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಸಫಲರಾಗಬೇಕು.

ಶಿರಹಟ್ಟಿ: ವಿದ್ಯಾರ್ಥಿಗಳು ಪರೀಕ್ಷೆಗಳ ಕುರಿತು ಭಯಪಡಬಾರದು. ಮನೋ ಧೈರ್ಯದಿಂದ ಎದುರಿಸಬೇಕು. ಯಾವ ವಿಷಯಗಳು ಕಬ್ಬಿಣದ ಕಡಲೆ ಅಲ್ಲ. ಸತತ ಅಧ್ಯಯನ ಹಾಗೂ ಶ್ರಮದಿಂದ ಕಠಿಣ ವಿಷಯಗಳನ್ನು ಕರಗತ ಮಾಡಿಕೊಂಡು ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರಗಳನ್ನು ಬರೆಯಬಹುದು ಎಂದು ಪ್ರಾಚಾರ್ಯ ಎಂ.ಸಿ. ಭಜಂತ್ರಿ ಕರೆ ನೀಡಿದರು.

ಪಟ್ಟಣದ ಎಫ್.ಎಂ. ಡಬಾಲಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಣಶಾಸ್ತ್ರ ವಿಷಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಮನೋ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ಹೇಳಿದರು.

ಹೊಸ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಗೆ ಸಂಪೂರ್ಣ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಸಫಲರಾಗಬೇಕು. ಪರೀಕ್ಷೆ ಕುರಿತು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಭಯ ಹೊರ ಹಾಕಿ. ಕೊನೆ ಗಳಿಗೆಯಲ್ಲಿ ಅನಗತ್ಯ ಒತ್ತಡಕ್ಕೆ ಒಳಗಾಗುವುದರ ಬದಲು ದೈರ್ಯದಿಂದ ಹಬ್ಬದಂತೆ ಪರೀಕ್ಷೆ ಎದುರಿಸಿ ಎಂದು ಕಿವಿಮಾತು ಹೇಳಿದರು.

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗದುಗಿನ ಎಚ್‌ಸಿಇಎಸ್ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಸುನಂದಾ ಪವಾರ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದುವರೆಗೂ ಓದಿದ್ದನ್ನು ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಎಫ್.ಎಂ. ಡಬಾಲಿ ಕಾಲೇಜಿನ ಶಿಕ್ಷಣ ಶಾಸ್ತ್ರ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ವಿಷಯಗಳ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಿಕ್ಷಣ ಶಾಸ್ತ್ರ ವಿಷಯ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ. ಅಂಕ ಗಳಿಕೆ ಒಂದೇ ಮುಖ್ಯವಲ್ಲ. ಅಂಕಗಳ ಜೊತೆಗೆ ನೈತಿಕ ಮೌಲ್ಯಗಳು ಜೀವನದಲ್ಲಿ ಅನ್ವಯವಾಗಬೇಕು. ಎಲ್ಲ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಅಧ್ಯಯನಶೀಲರಾಗಿ ಭಯ, ಆತಂಕವಿಲ್ಲದೆ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕು ಎಂದರು.

ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಹೆದರಿಕೆ ಬಿಟ್ಟು ಮಾನಸಿಕವಾಗಿ ಸದೃಢರಾಗಿ ಪರೀಕ್ಷೆ ಎದುರಿಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ನಕಲು ಮಾಡುವುದನ್ನು ಬಿಟ್ಟು ಮೌಲ್ಯಯುತವಾಗಿ ಪರೀಕ್ಷೆ ಬರೆಯಬೇಕು. ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದ ಅವರು, ಪರೀಕ್ಷೆ ಕುರಿತು ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಬಿಡಿ ಎಂದರು.

ಕಾಲೇಜಿನ ಉಪನ್ಯಾಸಕ ಎನ್. ಹನುಮರೆಡ್ಡಿ, ವೈ.ಎಸ್. ಪಂಗಣ್ಣವರ್, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಎಫ್.ಎ. ಬಾಬುಖಾನವರ, ಪಿ.ವಿ. ಹೊಸೂರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಭಜಂತ್ರಿ ಅವರನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುನಂದಾ ಪವಾರ್ ಅವರನ್ನು ಗೌರವಿಸಲಾಯಿತು. ಶಿಕ್ಷಣ ಶಾಸ್ತ್ರ ವಿಷಯದ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ್ ಶಿರುಂದ ವಂದಿಸಿದರು.