ರಾಜಕಾರಣ ಬಿಟ್ಟು ಅದೇಶ ಜಾರಿ ಮಾಡಿ

| Published : Oct 01 2024, 01:21 AM IST

ಸಾರಾಂಶ

ತುರುವೇಕೆರೆ: ರಾಜ್ಯ ಸರ್ಕಾರ ರಾಜಕಾರಣವನ್ನು ಬಿಟ್ಟು ಕೂಡಲೇ ಸಂಪುಟ ಸಭೆ ಕರೆದು ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಬಂಡಾಯ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಒತ್ತಾಯಿಸಿದರು.

ತುರುವೇಕೆರೆ: ರಾಜ್ಯ ಸರ್ಕಾರ ರಾಜಕಾರಣವನ್ನು ಬಿಟ್ಟು ಕೂಡಲೇ ಸಂಪುಟ ಸಭೆ ಕರೆದು ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಬಂಡಾಯ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಒತ್ತಾಯಿಸಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಆದಿಜಾಬವ ಮಹಾಸಭಾ, ಛಲವಾದಿ ಮಹಾಸಭಾ, ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಒಳಮೀಸಲಾತಿ ಜಾರಿಗಾಗಿ ಹಮ್ಮಿಕೊಂಡಿದ್ದ ತಮಟೆ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು.

ಒಳ ಮೀಸಲಾತಿ ಜಾರಿಗಾಗಿ ರಾಜ್ಯಾದ್ಯಂತ ಹೋರಾಟಗಳನ್ನು ತೀವ್ರಗೊಳಿಸಬೇಕಿದೆ. ಸುಮಾರು ೨೦ ವರ್ಷಗಳಿಂದ ದಲಿತ ಸಂಘಟನೆಗಳು ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿವೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಮೀಸಲಾತಿ ನೀಡುವಂತೆ ಸೂಚನೆ ನೀಡಿದೆ. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಇದರಲ್ಲಿ ರಾಜಕಾರಣ ಮಾಡದೇ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಡಿಎಸ್ ಎಸ್ ತಾಲೂಕು ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ ತಾಲೂಕಿನ ಎಲ್ಲಾ ದಲಿತ ಕಾಲೋನಿಗಳಲ್ಲಿ ಕೂಡಲೇ ಸಮರ್ಪಕವಾಗಿ ಸ್ಮಶಾನವನ್ನು ಮಂಜೂರು ಮಾಡಬೇಕು. ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಇ - ಸ್ವತ್ತು ಮಾಡಿಸಲು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಬೇಕು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನುರಿತ ವೈದ್ಯರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ, ತಾಲೂಕು ಕಚೇರಿವರೆಗೂ ತಮಟೆ ಬಾರಿಸುವ ಮೂಲಕ ಮೆರವಣಿಗೆ ಮಾಡಿ ಸರ್ಕಾರದ ವಿರುದ್ದವಾಗಿ ಘೋಷಣೆ ಕೂಗಲಾಯಿತು. ಪ್ರತಿಭಟನೆ ನಂತರ ತಹಶೀಲ್ದಾರ್ ಎನ್.ಎ.ಕುಂ.ಇ ಅಹಮದ್ ಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಆದಿಜಾಂಬವ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಸಿಐಟಿಯು ಸತೀಶ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಡಿ.ಎಸ್.ಎಸ್ ಮುಖಂಡರಾದ ಶಾಂತಕುಮಾರ್, ನರಸಿಂಹರಾಜು, ಮಲ್ಲೂರು ತಿಮ್ಮೇಶ್, ಗೋಪಾಲ್, ಲಾವಣ್ಯ, ಲಕ್ಷ್ಮೀದೇವಮ್ಮ, ದಯಾನಂದ್, ರಾಘು, ಮಾಯಸಂದ್ರ ಸುಬ್ರಮಣ್ಯ, ಗುರುದತ್, ಕೆಂಪಣ್ಣ, ಗಂಗರಾಜು, ಕೀರ್ತಿ, ರಂಗಸ್ವಾಮಿ, ಮೂರ್ತಿ, ಮುಸ್ಲಿಂ ಮುಖಂಡ ಅಫ್ಜಲ್, ಡಿ.ಆರ್.ಲಕ್ಷ್ಮೀಶ, ಗೋವಿಂದರಾಜು, ಪ್ರವೀಣ್, ಶಾಂತಪ್ಪ, ಶಿವನಂಜಪ್ಪ, ಬೋರಪ್ಪ, ರಾಮಚಂದ್ರ ಸೇರಿದಂತೆ ಇತರರು ಇದ್ದರು.