ಬರ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕಾದ ಪ್ರತಿಪಕ್ಷವಾಗಿರುವ ಬಿಜೆಪಿ, ತನ್ನ ಕೆಲಸವನ್ನೇ ಮರೆತಿದೆ. ಸರ್ಕಾರಕ್ಕೆ ಸಲಹೆ-ಸೂಚನೆ ನೀಡುವುದನ್ನು ಬಿಟ್ಟು, ಸಚಿವ ನಾಗೇಂದ್ರ ಅವರ ವಿಷಯವನ್ನೇ ಪ್ರಸ್ತಾಪಿಸುತ್ತಾ ಸದನವನ್ನು ನಡೆಸಲು ಬಿಡುತ್ತಲೇ ಇಲ್ಲ.
ಹುಬ್ಬಳ್ಳಿ:
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಬಿಜೆಪಿಗರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ವಿನೋದ ಅಸೂಟಿ ಟೀಕಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬರ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕಾದ ಪ್ರತಿಪಕ್ಷವಾಗಿರುವ ಬಿಜೆಪಿ, ತನ್ನ ಕೆಲಸವನ್ನೇ ಮರೆತಿದೆ. ಸರ್ಕಾರಕ್ಕೆ ಸಲಹೆ-ಸೂಚನೆ ನೀಡುವುದನ್ನು ಬಿಟ್ಟು, ಸಚಿವ ನಾಗೇಂದ್ರ ಅವರ ವಿಷಯವನ್ನೇ ಪ್ರಸ್ತಾಪಿಸುತ್ತಾ ಸದನವನ್ನು ನಡೆಸಲು ಬಿಡುತ್ತಲೇ ಇಲ್ಲ. ಸಚಿವ ನಾಗೇಂದ್ರ ಅವರ ಪ್ರಕರಣ ಕೋರ್ಟ್‌ನಲ್ಲಿದೆ. ಜತೆಗೆ ಅವರ ವಿರುದ್ಧ ಇರುವುದು ಬರೀ ಆರೋಪ ಮಾತ್ರ. ಆದರೂ ಅವರ ರಾಜೀನಾಮೆಗೆ ಪಟ್ಟು ಹಿಡಿದು ಕುಳಿತಿದೆ. ಜನರ ಸಂಕಷ್ಟಗಳು ಈ ಬಿಜೆಪಿಗೆ ಬೇಕಾಗಿಲ್ಲ. ಬರೀ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಜನರು ಶಾಸಕರನ್ನು ಆಯ್ಕೆ ಮಾಡಿಕಳುಹಿಸುವುದು ಅವರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಿ ಅವುಗಳಿಗೆ ಪರಿಹಾರ ಕಾಣಬೇಕೆಂಬ ದೃಷ್ಟಿಯಿಂದ. ಆ ಕೆಲಸ ಮಾಡದೇ ಸದನದಲ್ಲೂ ಬರೀ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ಜನತೆ ಕ್ಷಮಿಸುವುದಿಲ್ಲ. ಇನ್ನಾದರೂ ಇದನ್ನು ಅರಿತುಕೊಂಡು ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಕೆಲಸ ಮಾಡಬೇಕು. ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರವನ್ನು ಟೀಕಿಸಲಿ. ವಿರೋಧಿಸಲಿ ಅದು ಬಿಟ್ಟು ರಾಜಕಾರಣ ಮಾಡುವುದು ಜನರಿಗೆ ಮಾಡಿದ ದ್ರೋಹ ಅಲ್ಲದೇ ಮತ್ತೇನು।? ಎಂದು ಪ್ರಶ್ನಿಸಿದ್ದಾರೆ.