ಸಾರಾಂಶ
ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ರಾಜಕೀಯ ಮಾಡುವುದು ಬಿಟ್ಟು ಸಲಹೆ ನೀಡಿ ಎಂದು ವಿರೋಧ ಪಕ್ಷಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ಅವರು ರಾಜಕೀಯ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ನಾವು ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಖಾಸಗಿ ಟ್ಯಾಂಕರ್ ಮಾಫಿಯಾ ತಡೆಗಟ್ಟಿದೆ. ಜನಸಾಮಾನ್ಯರಿಗೆ ಸಮಸ್ಯೆಯಾಗಿರುವುದು ಸತ್ಯ. ನಮಗೆ ನೀರಿನ ಬೆಲೆ ಗೊತ್ತಿದೆ. ಜನರಿಗೆ ಸಮಸ್ಯೆಯಾಗದಂತೆ ನಿಭಾಯಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನೀರಿನ ಹಾಹಾಕಾರದ ಬಗ್ಗೆ ತೋರಿಸುತ್ತಿದ್ದೀರಿ. ಕೊಳವೆ ಬಾವಿಗಳು ಬತ್ತಿದಾಗ ಹಾಹಾಕಾರ ಉದ್ಭವಿಸುವುದು ಸಹಜ. ನಾವು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಕಾರು, ವಾಹನ ತೊಳೆಯಲು ಹಾಗೂ ಇತರೆ ಬಳಕೆಗೆ ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು ಎಂದರು.ಗ್ರಾಮಾಂತರ ಭಾಗಕ್ಕೆ ನೋಡಲ್ ಅಧಿಕಾರಿಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ ಹೆಚ್ಚು ಟ್ಯಾಂಕರ್ ಮೂಲಕ ನೀರು ಬರುತ್ತಿದೆ. ಹೀಗಾಗಿ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.