ಸಾರಾಂಶ
ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ, ಶ್ರೀ ಮಹದೇಶ್ವರ, ಶ್ರೀ ಸೋಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ಮೊದಲಾದ ವಿಶೇಷ ಪೂಜೆಗಳು ನೆರವೇರಿದವು.
ಕನ್ನಡಪ್ರಭ ವಾರ್ತೆ ಸುತ್ತೂರು
ಶ್ರೀ ಸುತ್ತೂರು ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅಹೋರಾತ್ರಿ ವಿಶೇಷ ಪೂಜೆ ಹಾಗೂ ಜಾಗರಣೆ ಕಾರ್ಯಕ್ರಮಗಳು ಸಾಂಗವಾಗಿ ಜರುಗಿತು.ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ, ಶ್ರೀ ಮಹದೇಶ್ವರ, ಶ್ರೀ ಸೋಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ಮೊದಲಾದ ವಿಶೇಷ ಪೂಜೆಗಳು ನೆರವೇರಿದವು.
ಸುತ್ತೂರಿನ ಜೆಎಸ್.ಎಸ್ ವಸತಿ ಶಾಲೆಯ ವಿದ್ಯಾರ್ಥಿಗಳು ಭಕ್ತಿಭಾವಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಮೈಸೂರಿನ ಋತ್ವಿಕ್ ಸಿ. ರಾಜ್ ಮತ್ತು ತಂಡದವರು ಭಕ್ತಿ ಗಾಯನವನ್ನು ನಡೆಸಿಕೊಟ್ಟರು. ಜೆಎಸ್.ಎಸ್. ಬಿ.ಎಡ್. ಕಾಲೇಜು ವಿದ್ಯಾರ್ಥಿಗಳು ಭೂಕೈಲಾಸ ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು. ತುಮಕೂರಿನ ಮಲ್ಲಸಂದ್ರದ ಡಾ. ಲಕ್ಷ್ಮಣ್ದಾಸ್ಶಾಸ್ತ್ರಿಗಳವರು ಶಿವಕಥಾ ಸಂಕೀರ್ತನೆ ಮಾಡಿದರು. ಮೈಸೂರಿನ ನಾದಲಹರಿ ತಂಡದವರು ಭಕ್ತಿ ಸುಧೆ ನಡೆಸಿಕೊಟ್ಟರು. ರಾಮಸಮುದ್ರದ ಶ್ರೀ ಸಿದ್ದಪ್ಪಾಜಿ ನೀಲಗಾರರ ಸಂಘದವರು ನೀಲಗಾರರ ಮೇಳವನ್ನು ಮತ್ತು ಹೊರಳವಾಡಿಯ ಶ್ರೀ ಬಸವೇಶ್ವರ ಭಜನಾ ತಂಡದವರು ಭಜನೆ ನಡೆಸಿಕೊಟ್ಟರು.ಚುಂಚನಹಳ್ಳಿ, ಚಾಮರಾಜನಗರದ ಕದಳಿ ಮಹಿಳಾ ವೇದಿಕೆ, ಸೋನಹಳ್ಳಿ, ಹೂರದಳ್ಳಿ, ಬದನವಾಳು, ಹೂಟಗಳ್ಳಿ, ದೇವನೂರು, ಹೆಳವರಹುಂಡಿ, ಆಲಹಳ್ಳಿ ಮತ್ತು ಭೋಗಯ್ಯನಹುಂಡಿ ಭಜನಾ ತಂಡದವರು ಶ್ರೀಮಠ ಹಾಗೂ ಶ್ರೀ ಗದ್ದುಗೆಯಲ್ಲಿ ಅಖಂಡ ಭಜನೆ ನಡೆಸಿಕೊಟ್ಟರು.
ಶ್ರೀ ನಂಜುಂಡೇಶ್ವರ ದೇವಸ್ಥಾನದ ಬಾಗಿಲುವಾಡ ಮತ್ತು ಬಾಗಿಲುಗಳಿಗೆ ಬೆಳ್ಳಿ ಕವಚವನ್ನು ಎಸ್. ಹೊಸಕೋಟೆಯ ಡಾ. ಎಚ್.ಎಸ್. ರಾಘವೇಂದ್ರರಾವ್ ಮತ್ತು ಕುಟುಂಬದವರು ಸಮರ್ಪಿಸಿದರು.ರಾತ್ರಿ 50ಕ್ಕೂ ಹೆಚ್ಚು ವಟುಗಳು ಶಿವದೀಕ್ಷೆ ಸಂಸ್ಕಾರ ಪಡೆದುಕೊಂಡರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.