ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕದ ಅತ್ಯಂತ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿರುವ ತಾಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಹಸ್ರಾರು ಸಂಖ್ಯೆಯ ಭಕ್ತರ ಶ್ರದ್ಧಾಭಕ್ತಿಯ ಹರ್ಷೋದ್ಗಾರಗಳ ಮಧ್ಯೆ ಜೋಡಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಬೆಳಗ್ಗೆ 11.45ರ ಸುಮಾರಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ವಿವಿಧ ಧಾರ್ಮಿಕ ಕಾರ್ಯಕ್ರಮದೊಡ್ಡ ರಥದಲ್ಲಿ ಭೋಗನಂದೀಶ್ವರಸ್ವಾಮಿ ಮತ್ತು ಗಿರಿಜಾಂಬ ಹಾಗೂ ಚಿಕ್ಕರಥದಲ್ಲಿ ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬಣ್ಣದ ಪತಾಕೆ, ಕಸೂತಿ ವಸ್ತ್ರ, ಹೂವುಗಳಿಂದ ಶೃಂಗಾರ ಗೊಂಡ ರಥಗಳನ್ನು ಭಕ್ತರು ದೇವಸ್ಥಾನದ ಸುತ್ತ ಎಳೆದರು. ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರದಿಂದಲೇ ದೇವಸ್ಥಾನದಲ್ಲಿ ದಿನವೀಡಿ ವಿಶೇಷ ಅಭಿಷೇಕ ಮತ್ತು ಹವನ ಹೋಮ, ಹಂಸ ವಾಹನೋತ್ಸವ, ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕ, ಕಾಶಿಯಾತ್ರೆ, ಹರಿಕಥೆ, ಭಜನೆ, ಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.ಶನಿವಾರ ಬೆಳಗಿನ ಜಾವ ಮೂರು ಮತ್ತು ನಾಲ್ಕನೇ ಯಾಮದ ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕಗಳನ್ನು ನೇರವೇರಿಸಲಾಯಿತು. ಶಿವರಾತ್ರಿ ಉಪವಾಸ ಮತ್ತು ಜಾಗರಣೆ ನಿರತ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಾಂಗಣ, ತೆಮಿಳುನಾಡು, ಮಹಾರಾಷ್ಟ್ರ ಕೇರಳ ರಾಜ್ಯಗಳಿಂದ ಸಹ ನಂದಿ ಜಾತ್ರೆಗೆ ಭಕ್ತರ ದಂಡೇ ಹರಿದು ಬಂದಿತ್ತು. 9ನೇ ಶತಮಾನದ ಮಂದಿರ
ನಂದಿಯ ಭೋಗ ನಂದೀಶ್ವರ ದೇವಸ್ಥಾನ ಸುಮಾರು 9ನೇ ಶತಮಾನದ್ದಿರಬಹುದೆಂದು ಹೇಳಲಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇವಸ್ಥಾನವನ್ನು ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಲಾಗಿದೆ. ಆ ದೇವಾಲಯದ ಆವರಣದ ಆಚೆ ಅತ್ಯಂತ ಸುಂದರವಾದ ಕಲ್ಯಾಣಿ ಅಥವಾ ಪುಷ್ಕರಿಣಿ ಇದೆ. ಸ್ಥಳೀಯವಾಗಿ ಇದನ್ನು ಶೃಂಗೇರಿ ತೀರ್ಥ ಎಂದು ಕರೆಯುತ್ತಾರೆ.