ಸಾರಾಂಶ
ಕಿಕ್ಕೇರಿ: ಸರ್ಕಾರಿ ಶಾಲಾ ಕಾಲೇಜುಗಳು ಹೈಟೆಕ್ ರೀತಿ ಪರಿವರ್ತನೆಯಾಗುತ್ತಿವೆ. ಪೋಷಕರು ಸರ್ಕಾರಿ ಶಾಲೆ ಉಳಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ದಾಖಲಾತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಖಾಸಗಿ ಶಾಲೆ, ಕಾಲೇಜು ವ್ಯಾಮೋಹದಿಂದ ದೊಡ್ಡ ಹೊಡೆತ ಬಿದ್ದಿದೆ ಎಂದರು.ತಾಲೂಕಿನ ಹಲವು ಸರ್ಕಾರಿ ಪಿಯುಸಿ ಕಾಲೇಜು ದಾಖಲಾತಿ ಕೊರತೆಗಳಿಂದ ಮುಚ್ಚುವ ಹಂತ ತಲುಪುತ್ತಿವೆ. ಸರ್ಕಾರಿ ಶಾಲೆ, ಕಾಲೇಜು ಉಳಿಸಲು ಪೋಷಕರು ಮುಂದಾಗಬೇಕು. ಕಾಲೇಜಿಗೆ ಹೆಚ್ಚುವರಿಯಾಗಿ 3 ಕೊಠಡಿಗಳನ್ನು 75 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಉಪನ್ಯಾಸಕರು ಆಯ್ಕೆಯಾಗಿದ್ದಾರೆ. ಪಾಠ, ಪ್ರವಚನ ನಡೆಯದಿದ್ದರೆ ಪೋಷಕರು, ವಿದ್ಯಾರ್ಥಿಗಳು ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ಹೋಬಳಿಯ ಆನೆಗೊಳ ಗ್ರಾಮದಲ್ಲಿ ಸರ್ಕಾರಿ ಕಾಲೇಜು ಆರಂಭಿಸಲು ಹೋರಾಟ ನಡೆಸಿ ತಂದೆವು. ಉತ್ತಮ ಪರಿಸರ, ಬೋಧಕ ಸಿಬ್ಬಂದಿ ಎಲ್ಲವೂ ಇದೆ. ಆದರೆ, ವಿದ್ಯಾರ್ಥಿಗಳು ನಗರ ಪ್ರದೇಶದ ಮೋಹಕ್ಕೆ ಸಿಲುಕಿದ್ದಾರೆ ಎಂದರು.ವಿದ್ಯಾರ್ಥಿಗಳು ತಾಲೂಕು ಕೇಂದ್ರದ ಕಾಲೇಜಿಗೆ ಸೇರುತ್ತಿದ್ದಾರೆ. ಈಗಾಗಲೇ ಮಂದಗೆರೆ ಪಿಯು ಕಾಲೇಜು ಮುಚ್ಚಿದೆ. ಆನೆಗೊಳ, ತೆಂಡೇಕೆರೆ ಕಾಲೇಜು ದಾಖಲಾತಿ ಕ್ಷೀಣಿಸಿದೆ. ಸರ್ಕಾರಿ ಕಾಲೇಜು ಉಳಿಸಿಕೊಳ್ಳದಿದ್ದರೆ ಬಡ ಪ್ರತಿಭಾನ್ವಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಎಚ್ಚರಿಸಿದರು. ಬಿಇಒ ವೈ.ಕೆ.ತಿಮ್ಮೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ದಿನೇಶ್‌ಬಾಬು, ಗ್ರಾಪಂ ಅಧ್ಯಕ್ಷ ಕೆ.ಜಿ. ಪುಟ್ಟರಾಜು, ಮಾಜಿ ಅಧ್ಯಕ್ಷರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಉಪಾಧ್ಯಕ್ಷೆ ಜ್ಯೋತಿ, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಇಸಿಒ ನವೀನ್, ಸಿಆರ್‌ಪಿ ನಾರಾಯಣ್, ಎಸ್.ಎಂ.ಬಸವರಾಜು, ಪ್ರತಾಪ್ ಇದ್ದರು.