ಸಾರಾಂಶ
ಕನಕಪುರ: ಮನುಷ್ಯನ ಜೀವನ, ತನ್ನ ಕುಟುಂಬದ ಜಂಜಾಟದಲ್ಲಿ ಕಳೆದು ಹೋಗಬಾರದು ಹುಟ್ಟಿದ ಮೇಲೆ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಿ ಒಂದು ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ತಿಳಿಸಿದರು.
ನಗರದ ರಂಗನಾಥ ಬಡಾವಣೆ ಹೊಂಗಿರಣದ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆ, ರಾಜ್ಯ ರೈತ ಸಂಘ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕೃತಿ ಬಿಡುಗಡೆ, ಗೀತ ಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವನ ತನ್ನ ಕುಟುಂಬ, ಸಂಸಾರದ ಜಂಜಾಟದಲ್ಲೇ ಮುಗಿದು ಹೋಗಬಾರದು. ಮನುಷ್ಯ ತನ್ನ ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತನೆ ಮಾಡಬೇಕು ಎಂದರು.ಸಮಾಜಮುಖಿ ಕಾಳಜಿ ಇರುವವರು ತಮ್ಮ ಬದುಕಿನ ಒಂದು ಭಾಗವನ್ನು ದೇಶ ಸೇವೆಗಾಗಿ ಮುಡಿಪಾಗಿಡುತ್ತಾರೆ. ಆ ಸಾಲಿಗೆ ರೈತ ಮುಖಂಡ ಚೀಲೂರು ಮುನಿರಾಜು ನಿಲ್ಲಲ್ಲಿದ್ದು, ರೈತ ಸಂಘದಲ್ಲಿ ತೊಡಗಿಸಿಕೊಂಡು ರೈತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದು, ಅವರು ನಡೆದು ಬಂದ ಹಾದಿಯ ಬಗ್ಗೆ ಸಾಹಿತಿ ಕೂ.ಗಿ.ಗಿರಿಯಪ್ಪನವರು ಪುಸ್ತಕವನ್ನು ಬರೆದಿರುವುದು ಬೇರೆಯವರಿಗೆ ಪ್ರೇರಣೆ ಮತ್ತು ಸ್ಪೂರ್ತಿಯಾಗಲಿದೆ ಎಂದರು.
ಸಾಹಿತಿ ಡಾ.ಎಂ.ಬೈರೇಗೌಡ ಮಾತನಾಡಿ, ಚೀಲೂರು ಮುನಿರಾಜು ಅವರು ರೈತ ಸಂಘದ ಮೂಲಕ ರೈತರ ಸಮಸ್ಯೆಗಳನ್ನು ಅನಾವರಣಗೊಳಿಸಿ ಸರ್ಕಾರದ ಗಮನ ಸೆಳೆಯುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಇದು ಉತ್ತಮ ಕೆಲಸವಾಗಿದ್ದು ರೈತರ ಆತ್ಮಸ್ಥೆರ್ಯವನ್ನು ಹೆಚ್ಚಿಸಿದೆ. ಇಂತಹ ಸಮಾಜಮುಖಿ ಕೆಲಸಗಳು ಆಗಬೇಕೆಂದು ತಿಳಿಸಿದರು.ಇದೇ ವೇಳೆ ಸಾಹಿತಿ ಕೂ.ಗಿ.ಗಿರಿಯಪ್ಪ ರಚಿಸಿದ ಕೃತಿಯನ್ನು ಬಿಡುಗಡೆ ಮಾಡಲಾಯಿತು. ರಮೇಶ್ ಹಂಚಳ್ಕರ್, ರಾವಗೋಡ್ಲು ವೆಂಕಟಗಿರಿಯಪ್ಪ, ಮೇದರದೊಡ್ಡಿ ಹನುಮಂತು ಕವಿತೆ ವಾಚಿಸಿದರು. ಚಂದ್ರಾಜ್, ಪುಟ್ಟರಾಜು, ನಾರಾಯಣರಾವ್ ಪಿಸ್ಸೆ, ಗೀತ ಗಾಯನ ನಡಸಿಕೊಟ್ಟರು. ರಮೇಶ್ ಹಂಚಳ್ಕರ್ ತಮ್ಮ ತಾಯಿ- ತಂದೆ ಹೆಸರಿನಲ್ಲಿ ತುಂಗಣಿ ಸರ್ಕಾರಿ ಶಾಲೆಯ 10 ವಿದ್ಯಾರ್ಥಿನಿಯರಿಗೆ ಸಮವಸ್ತ್ರಗಳನ್ನು ವಿತರಿಸಿದರು.
ಸಾಹಿತಿ, ಆಕಾಶವಾಣಿ ಕಲಾವಿದ ಚಿಕ್ಕಮರೀಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಕುಮಾರಸ್ವಾಮಿ, ಗಬ್ಬಾಡಿ ಕಾಡೆಗೌಡ, ಟಿ.ಎಂ ರಾಮಯ್ಯ, ನಾಗರಾಜು, ಚಿಕ್ಕರಂಗಯ್ಯ, ಕುಮಾರ್, ಬಸವರಾಜು, ಎಂ.ಚಂದ್ರ, ಚಿಕ್ಕೆಂಪೆಗೌಡ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:ಕನಕಪುರದಲ್ಲಿ ನಡೆದ ಕೃತಿ ಬಿಡುಗಡೆ, ಗೀತಗಾಯನ, ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿಗಳು, ವಿವಿಧ ಸಂಘಟನೆಯ ಮುಖಂಡರು ಉದ್ಘಾಟಿಸಿದರು.