ಅಭಿವೃದ್ಧಿ ಬಿಟ್ಟು, ಕಾಂಗ್ರೆಸ್‌ನಿಂದ ಹಣ ಬಲದ ಮೇಲೆ ಚುನಾವಣೆ

| Published : May 05 2024, 02:04 AM IST

ಅಭಿವೃದ್ಧಿ ಬಿಟ್ಟು, ಕಾಂಗ್ರೆಸ್‌ನಿಂದ ಹಣ ಬಲದ ಮೇಲೆ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಕ್ಕೆ ಬಂದು ವರ್ಷವಾದರೂ ನೀಡಿದ ಭರವಸೆ ಯಾಕೆ ಈಡೇರಿಸಿಲ್ಲ. ಕಾಂಗ್ರೆಸ್ ನಾಯಕರು ಬರಿ ಬಾಯಲ್ಲಿ ಹೇಳುವುದನ್ನು ನಿಲ್ಲಿಸಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಹೇಳಿದ್ದಾರೆ.

ಶಿರಸಿ: ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಅಭಿವೃದ್ಧಿ ಪ್ರಯತ್ನ ಏನು ಎಂಬುದನ್ನು ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೇ ಅಡ್ಡಗೋಡೆ ಮೇಲೆ ದೀಪ ಇಡುವಂತಹ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಆರೋಪಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಡಳಿತದ ಅವಧಿಯಲ್ಲಿ ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಶಿರಸಿಯಲ್ಲಿ ಪರಿಸರ ವಿಶ್ವ ವಿದ್ಯಾಲಯವನ್ನು ಘೋಷಣೆ ಮಾಡಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಕೈ ಬಿಡಲಾಗಿದೆ ಎಂಬುದಕ್ಕೆ ಉತ್ತರ ನೀಡಬೇಕು. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಫಾರ್ಮ್‌ ನಂ. ೩ ಸಮಸ್ಯೆ ೧೫ ದಿನಗಳಲ್ಲಿ ಬಗೆಹರಿಸಲಾಗುತ್ತದೆ. ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್‌ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ. ಅಧಿಕಾರಕ್ಕೆ ಬಂದು ವರ್ಷವಾದರೂ ನೀಡಿದ ಭರವಸೆ ಯಾಕೆ ಈಡೇರಿಸಿಲ್ಲ. ಕಾಂಗ್ರೆಸ್ ನಾಯಕರು ಬರಿ ಬಾಯಲ್ಲಿ ಹೇಳುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡಲಾಗದೇ, ಕಾಂಗ್ರೆಸ್‌ ಹಣದ ಬಲದ ಮೇಲೆ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡಲು ಕಾಂಗ್ರೆಸ್ ಬಹಳಷ್ಟು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಆರೋಪಿಸಿದರು.

ಶಿರಸಿಯ ಕೆಲ ಉದ್ಯಮಿಗಳ ಆದಾಯ ತೆರಿಗೆ ಇಲಾಖೆ ದಾಳಿ ಕುರಿತು ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಸದಾನಂದ ಭಟ್ಟ, ಇದು ರಾಜಕೀಯ ಪ್ರೇರಿತ ದಾಳಿಯಲ್ಲ. ಅವರ ಉದ್ಯಮಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಪ್ರತಿಕ್ರಿಯಿಸಿದರು.

ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಗೌರವದಿಂದ ಸ್ವೀಕರಿಸಿದ್ದರು. ಅವರು ನಮ್ಮ ಸಂಸದರು. ಯಾಕೆ ಬಂದಿಲ್ಲ ಎಂದು ನಾವು ಕೇಳಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಪರ ಜನರಿಗೆ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ನಗರ ಮಂಡಳಾಧ್ಯಕ್ಷ ಆನಂದ ಸಾಲೇರ, ಪ್ರಮುಖರಾದ ರಮಾಕಾಂತ ಭಟ್ಟ, ಆರ್.ವಿ. ಹೆಗಡೆ ಚಿಪಗಿ, ಮಾಂತೇಶ ಹಾದಿಮನಿ, ಗಣಪತಿ ನಾಯ್ಕ, ಗ್ರಾಮೀಣ ಮಂಡಳಾಧ್ಯಕ್ಷೆ ಉಷಾ ಹೆಗಡೆ ಮತ್ತಿತರರು ಇದ್ದರು.