ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಬೆಳೆಸಿ: ಪರಮೇಶ್ವರಗೌಡ ಹಿರೇಗೌಡರ

| Published : Mar 07 2025, 12:53 AM IST

ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಬೆಳೆಸಿ: ಪರಮೇಶ್ವರಗೌಡ ಹಿರೇಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ನೆಲದ ಮಾತೃಭಾಷೆ ಕನ್ನಡವನ್ನು ಬಳಸುವ, ಬೆಳೆಸುವ ಹಾಗೂ ಉಳಿಸುವ ಕೈಂಕರ್ಯದಲ್ಲಿ ನಾವೆಲ್ಲ ತೊಡಗಿಕೊಳ್ಳಬೇಕು.

ರಾಣಿಬೆನ್ನೂರು: ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆ ಉಸಿರುಗಟ್ಟುವ ವಾತಾವರಣಕ್ಕೆ ಸಿಲುಕಿದ್ದು ಖೇದದ ಸಂಗತಿಯಾಗಿದ್ದು, ಮಕ್ಕಳಿಗೆ ಮಾತೃಭಾಷೆಯಿಂದಲೇ ಶಿಕ್ಷಣ ನೀಡುವ ಅಗತ್ಯವಿದೆ ಎಂದು ದತ್ತಿ ದಾನಿ ಹಾಗೂ ನ್ಯಾಯವಾದಿ ಪರಮೇಶ್ವರಗೌಡ ಹಿರೇಗೌಡರ ತಿಳಿಸಿದರು. ನಗರದ ಮೆಡ್ಲೇರಿ ರಸ್ತೆ ಕನ್ನಡ ಸಾಹಿತ್ಯ ಭವನದಲ್ಲಿ ವಿವಿಧ ದತ್ತಿ ನಿಧಿ ದಾನಿಗಳ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಲದ ಮಾತೃಭಾಷೆ ಕನ್ನಡವನ್ನು ಬಳಸುವ, ಬೆಳೆಸುವ ಹಾಗೂ ಉಳಿಸುವ ಕೈಂಕರ್ಯದಲ್ಲಿ ನಾವೆಲ್ಲ ತೊಡಗಿಕೊಳ್ಳಬೇಕು. ಎಲ್ಲ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಜ್ಞಾನ ವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.ಶ್ರೀ ಶಾರದಾ ನೃತ್ಯಾಲಯ ಸಂಸ್ಥೆಯ ಅಧ್ಯಕ್ಷ ಪರಶುರಾಮ ಸವಣೂರ ಕಾರ್ಯಕ್ರಮ ಉದ್ಘಾಟಿಸಿದರು. ದತ್ತಿ ದಾನಿ ಈರಯ್ಯ ಮಠಪತಿ ಮಾತನಾಡಿದರು. ಶಿಕ್ಷಣದಲ್ಲಿ ಅಧ್ಯಾತ್ಮ ಮತ್ತು ಸಾಹಿತ್ಯದ ಸಮಕಾಲೀನ ಪ್ರಸ್ತುತತೆ ಬಗ್ಗೆ ಆರ್‌ಟಿಇಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀನಿವಾಸ ನಲವಾಗಲ, ಪ್ರಾಥಮಿಕ ಶಾಲಾ ಶಿಕ್ಷಣದ ಸಮಸ್ಯೆ ಹಾಗೂ ಪದವಿ ವಿದ್ಯಾರ್ಥಿಗಳ ಸಾಂಸ್ಕೃತಿಕ ನಡೆಗಳು ವಿಷಯ ಕುರಿತು ಕ್ಷೇತ್ರ ಸಮನ್ವಯಾಧಿಕಾರಿ ಮಂಜ ನಾಯಕ್ ಹಾಗೂ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮತ್ತು ನಾಡು-ನುಡಿಗೆ ಯುವಕರ ಪಾತ್ರ ವಿಷಯ ಕುರಿತು ಸಮಾಜ ಸೇವಕ ಮನೋಜಕುಮಾರ ಅಂಗಡಿ ಉಪನ್ಯಾಸ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಡಿಗರ, ಚಂದ್ರಶೇಖರ ಮಡಿವಾಳರ, ಶೋಭಾ ನಾಗನಗೌಡ್ರ, ಡಾ. ಕಾಂತೇಶ ಅಂಬಿಗೇರ, ಎಸ್.ಜಿ. ನಾಗನಗೌಡ್ರ, ವಿದ್ಯಾವತಿ ಮಳಿಮಠ, ಮಂಜುಳಾ ಸವಣೂರ, ವಿಜಯಲಕ್ಷ್ಮಿ ಮಠದ, ಇಂದಿರಾ ಕೊಪ್ಪದ, ಇಸ್ಮಾಯಿಲ್ ಐರಣಿ, ಬಸವರಾಜ ಎಂ. ಮತ್ತಿತರರಿದ್ದರು.ರಾಣಿಬೆನ್ನೂರಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ

ರಾಣಿಬೆನ್ನೂರು: ಸ್ಥಳೀಯ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ನಗರದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.ನಗರದ ರೈಲ್ವೆ ಸ್ಟೇಷನ್ ರೋಟರಿ ಪ್ರೈಮರಿ ಶಾಲೆ ಬಳಿಯಿಂದ ಹೊರಟ ಜಾಥಾ ಅಶೋಕ ಸರ್ಕಲ್, ಪೋಸ್ಟ್ ಸರ್ಕಲ್, ಪುನೀತ್ ರಾಜಕುಮಾರ ಸರ್ಕಲ್, ಬಸ್‌ ನಿಲ್ದಾಣ ಸರ್ಕಲ್‌ವರೆಗೆ ಸಾಗಿ ಕೊನೆಗೊಂಡಿತು.

ಈ ಸಮಯದಲ್ಲಿ ಡಾ. ವಿದ್ಯಾ ವಾಸುದೇವಮೂರ್ತಿ ಮಾತನಾಡಿ, ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಪ್ರತಿವರ್ಷ ಜಗತ್ತಿನಾದ್ಯಂತ ಇದಕ್ಕೆ ಮಿಲಿಯನ್ ಸಂಖ್ಯೆಯಲ್ಲಿ ಜನರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬೇಕು ಎಂದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಸಂಜನಾ ಕುರವತ್ತಿ, ಕಾರ್ಯದರ್ಶಿ ಪ್ರಮೀಳಾ ಜಂಬಗಿ, ಡಾ. ಸುಗುಣಾ ಚಳಗೇರಿ, ಪ್ರಿಯಾ ಸಾಹುಕಾರ್, ಭಾರತಿ ಜಂಬಗಿ, ಸರಳ ಜಂಬಗಿ, ಪುಷ್ಪ ಮಾಳಗಿ, ಡಾ. ಹೇಮಾ ಪಾಟೀಲ, ಸರೋಜಾ ಕುಬಸದ, ಕವಿತಾ ಬಾದಾಮಿ, ಸುಜಾತ ಮೆಣಜಿಗಿ, ಹುಲಿಹಳ್ಳಿ, ನೀತಾ ಮಿರ್ಜಿ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.