ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಹೊಸದಾಗಿ ನಿರ್ಮಾಣವಾಗಲಿರುವ ಕಾರ್ಖಾನೆಗೆ ಮನೆ ಮನೆಯಿಂದ ಮಣ್ಣು ಸಂಗ್ರಹಿಸುವ ಬದಲು ಕಬ್ಬು ತರುವ ಕೆಲಸ ಮಾಡಲಿ ಎಂದು ಶಾಸಕ ಪಿ.ರವಿಕುಮಾರ್ ಹೇಳಿಕೆಗೆ ರೈತ ಮುಖಂಡೆ ಸುನಂದಾ ಜಯರಾಂ ಪ್ರತಿಕ್ರಿಯಿಸಿದರು.
ಕಾವೇರಿಗಾಗಿ ವಾರಕ್ಕೊಮ್ಮೆ ಚಳವಳಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಜಮೀನಿನಲ್ಲಿ ಕಬ್ಬು ಇದ್ದರೂ ಸಹ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಲಾಯಿತು. ಮನೆ ಮನೆ ತಿರುಗಿ ಕಬ್ಬು ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಮಣ್ಣು ತಂದು ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಮೈಷುಗರ್ ಘನತೆಗೆ ಚ್ಯುತಿ ತರುವುದು ಬೇಡ ಎಂದರು.ಸಕ್ಕರೆ ಕಾರ್ಖಾನೆಯನ್ನು ಅಯೋಧ್ಯೆಯ ಶ್ರೀರಾಮಮಂದಿರ, ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಲಿಕೆ ಮಾಡುವ ಮೂಲಕ ಕಾರ್ಖಾನೆಗೆ ಹೊಸ ಹೆಸರು ನಾಮಕರಣ ಮಾಡಲು ಶಾಸಕರು ಮುಂದಾಗಿರುವಂತಿದೆ. ಮೈಷುಗರ್ ಕಾರ್ಖಾನೆ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲ. ಅದರಲ್ಲಿ ಕೋಲ್ಮನ್ ಚಿಂತನೆಯ ಸಾಕಾರವಾಗಿದೆ. ಇದೀಗ ಶಾಸಕರು ಭಾವನಾತ್ಮಕ ವಿಚಾರ ಮುಂದಿಟ್ಟು ದೇವಾಲಯಗಳಿಗೆ ಹೋಲಿಕೆ ಮಾಡಿ ಮೌಢ್ಯ ಬಿತ್ತುವ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹೊಸ ಕಾರ್ಖಾನೆ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಶಾಸಕರು ಸಾತನೂರು ಫಾರಂ ಬಳಿ ನೂತನ ಕಾರ್ಖಾನೆ ನಿರ್ಮಾಣ ಆಗಲಿದೆ ಎಂದಿದ್ದಾರೆ. ಹೊಸ ಕಾರ್ಖಾನೆ ಮೈಷುಗರ್ ಇರುವ ಸ್ಥಳದಲ್ಲಿಯೇ ನಿರ್ಮಾಣ ಆಗಬೇಕು. ಯಾರಾದರೂ ಐಟಿ ಬಿಟಿ ಪಾರ್ಕ್ ಕೇಳಿದ್ದೇವಾ, ಈಗಾಗಲೇ ಐಟಿ-ಬಿಟಿ ಕಥೆ ನೋಡಿಲ್ಲವಾ ಖಾಸಗಿಯವರಿಗೆ ಕಾರ್ಖಾನೆಯ ಆಸ್ತಿಯನ್ನು ನೀಡಲು ಹುನ್ನಾರ ನಡೆಸಲು ಮುಂದಾಗಿದ್ದಾರಾ ಎಂದು ಪ್ರಶ್ನಿಸಿದರು.ಹಿಂದೆ ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಕಾರ್ಖಾನೆ ಆಸ್ತಿ ಪ್ರಸ್ತುತ ೧೦೯ ಎಕರೆಗೆ ಕುಸಿದಿದೆ. ಈ ಆಸ್ತಿಯನ್ನೂ ಖಾಸಗಿ ಕಂಪನಿಗಳಿಗೆ ಪರಭಾರೆ ಮಾಡಲು ಮುಂದಾಗಿದ್ದಾರೆ. ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ, ಎಥನಾಲ್ ಘಟಕ ಯಾವುದು ಚಾಲನೆಯಲ್ಲಿಲ್ಲ, ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಸರ್ಕಾರ ಹೊಸ ಕಾರ್ಖಾನೆ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಬೇರೆಡೆ ಕಾರ್ಖಾನೆ ನಿರ್ಮಾಣ ಮಾಡಬಾರದು ಎಂದರು.