ಬೀದಿರಂಪ ಬಿಟ್ಟು ನ್ಯಾಯಾಲಯದಲ್ಲಿ ಹೋರಾಡಿ

| Published : Aug 19 2024, 12:49 AM IST

ಸಾರಾಂಶ

Leave the streets and fight in court

-ಮುಖ್ಯಮಂತ್ರಿ ಸಿದ್ದರಾಮಯ್ಕಗೆ ಛಲವಾದಿ ನಾರಾಯಣಸ್ವಾಮಿ ಸಲಹೆ

----

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮುಡಾ ಹಗರಣಕ್ಕೆಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಷಿಕ್ಯೂಷನ್ ನ್ ಗೆ ಅನುಮತಿ ನೀಡಿರುವ ವಿಷಯವ ಕೈಗೆತ್ತಿಕೊಂಡು ಬೀದಿ ರಂಪ ಮಾಡುವ ಬದಲು ನ್ಯಾಯಾಲಯದಲ್ಲಿ ಹೋರಾಟ ಮಾಡುವಂತೆ ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದಾರೆ.

ವಿಪಕ್ಷ ನಾಯಕರಾದ ನಂತರ ಇದೇ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿ ವಿವಿಧ ಮಠಗಳಿಗೆ ಭೇಟಿ ನೀಡಿದ ತರುವಾಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಭೀರ ಆರೋಪ ಬಂದಿರುವುದರಿಂದ ರಾಜಿನಾಮೆ ನೀಡಿ ಪ್ರಕರಣ ಎದುರಿಸಿ. ಮತ್ತೊಬ್ಬ ಕೇಜ್ರಿವಾಲ್ ಆಗಲು ಹೋಗದಿರಿ. ಕೇಜ್ರಿವಾಲ್ ಹಲವು ತಿಂಗಳಿಂದ ಜೈಲಿನಿಂದ ರಾಜ್ಯ ನಡೆಸುತ್ತಿದ್ದಾರೆ. ಇಂಥ ವ್ಯವಸ್ಥೆ ನಮ್ಮಲ್ಲಿ ಇರಬಾರದು ಎಂದರು.

ದಲಿತರ ಭೂಮಿಗೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ಪರಿಹಾರ ಕೊಡುವುದು ಕರ್ನಾಟಕದಲ್ಲಿ ಪ್ರಥಮ ಅನ್ನಿಸುತ್ತಿದೆ. ಭೂಮಿಯೇ ನಿಮ್ಮದಲ್ಲ, 14 ನಿವೇಶನ ನಿಮಗೆ ಬೇಕೇ? ಇದರಿಂದ ನಿಮ್ಮ ಅಂತರಂಗ ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ತಿಳಿಯುವಂತಾಗಿದೆ. ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೀರ? ಇನ್ನೊಂದೆಡೆ ದಲಿತರ ಹಣವನ್ನು ದಲಿತರಿಗೇ ಕೊಡುವುದಾಗಿ ಭಾಷಣ ಮಾಡುತ್ತೀರ. ದಲಿತರ ಹಣವನ್ನು ಬೇರೆಯವರಿಗೆ ಕೊಡಲು ನಾವು ಬಿಡುವುದಿಲ್ಲ. ರೈಲ್ವೆ ಖಾತೆಯನ್ನು ಹೊಂದಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ರೈಲು ಅವಘಡದ ಸುದ್ದಿ ಕೇಳಿ ರಾಜೀನಾಮೆ ಕೊಟ್ಟಿದ್ದರು. ಅಂಥ ನಾಯಕರಿದ್ದ ಈ ದೇಶದಲ್ಲಿ ತಾವು ಜೈಲಿಂದಲೇ ರಾಜ್ಯವಾಳುವೆ ಎಂಬ ಪರಿಸ್ಥಿತಿಗೆ ಹೋಗಬೇಡಿ ಎಂದರು.

ಕರ್ನಾಟಕವು ನಾವು ಹಿಂದೆ ತಿಳಿಸಿದ್ದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡಿನ ಎಟಿಎಂ ಆಗಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೇ ಒಂದು ಕಾಮಗಾರಿಯ ಟೇಪ್ ಕಟ್ ಮಾಡಿಲ್ಲ. ಟೇಪ್ ಹಾಳಾಗದಂತೆ, ಕತ್ತರಿಗೂ ರಜೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.

ವಿಪಕ್ಷವಾಗಿ ಬಿಜೆಪಿ ಸೆಟೆದು ನಿಂತು ಸರ್ಕಾರದ ಭ್ರಷ್ಟಾಚಾರ ಹೊರಕ್ಕೆ ತರುವ ಕೆಲಸ ಮಾಡುತ್ತಿದೆ. ಇವರ ಭ್ರಷ್ಟಾಚಾರ ತಿಳಿಸಲು ಬೆಂಗಳೂರು- ಮೈಸೂರು ಪಾದಯಾತ್ರೆ ನಡೆಸಿದ್ದೇವೆ. ಈಗ ನ್ಯಾಯಾಲಯಕ್ಕೂ ಹೋಗಲಿದ್ದೇವೆ. ಮಾತೆತ್ತಿದರೆ ಡಾ.ಅಂಬೇಡ್ಕರರ ಕುರಿತು ಭಾಷಣ ಮಾಡುತ್ತೀರಿ. ಸಂವಿಧಾನದ ಪ್ರಕಾರ ನಡೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಡಾ. ಅಂಬೇಡ್ಕರ್, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ನಿನ್ನೆಯೇ ರಾಜೀನಾಮೆ ಕೊಡಬೇಕಿತ್ತು. ಒಂದು ದಿನ ತಡವಾಗಿದ್ದರೂ ಪರವಾಗಿಲ್ಲ, ಇವತ್ತಾದರೂ ರಾಜೀನಾಮೆ ಕೊಡಿ. ಜನರಿಗೆ ತೊಂದರೆ ಆಗುವ ಬೀದಿ ಹೋರಾಟ ಮಾಡಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ಸಲಹೆ ಮಾಡಿದರು.

ಬಿ.ಎಸ್.ವೈ ವಿಚಾರದಲ್ಲಿ ರಾಜ್ಯಪಾಲರ ಪ್ರಾಷಿಕ್ಯೂಷನ್ ಗೆ ಅನುಮತಿ ನೀಡಿದಾಗ ಅಂದು ಕಾಂಗ್ರೆಸ್ ಸ್ವಾಗತಿಸಿತ್ತು. ಈಗ ರಾಜ್ಯಪಾಲರ ನಿರ್ಧಾರ ವಿರೋಧಿಸುವ ಬದಲು ಸ್ವಾಗತಿಸಬೇಕಿತ್ತು. ಸಿದ್ದರಾಮಯ್ಯರವರ ಬಳಿ ದೇಶಪ್ರೇಮವಿದ್ರೆ, ಈ ಆರೋಪವನ್ನು ಒಪ್ಪಿಕೊಂಡಿದ್ದರೆ ಭ್ರಷ್ಟಾಚಾರ ವಿರೋಧಿಗಳೆನ್ನಬಹುದಿತ್ತು. ಪ್ರತಿಭಟಿಸಿದರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡಿ ಎಂದಾಗುತ್ತದೆಎಂದರು.

ಸಿಎಂ ಸಿದ್ಧರಾಮಯ್ಯ ಬಂಧನ ಆಗಲೇಬೇಕಾಗುತ್ತದೆ. ಬಂಧನ ಆಗದೆ ತನಿಖೆ ಹೇಗೆ ಎದುರಿಸುತ್ತೀರಿ? ಬಿಎಸ್ ವೈ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಪಾಲನೆ ಎಂದಿದ್ದೀರಿ.ಈಗ ರಾಜ್ಯಪಾಲರು ಕಾನೂನು ಉಲ್ಲಂಘಿಸಿದ್ದಾರೆ ಎನ್ನುತ್ತೀರಿ. ಗೃಹ ಸಚಿವ ಪರಮೇಶ್ವರ್ ಗೆ ಅವತ್ತಿಗೂ ಇವತ್ತಿನ ರಾಜ್ಯಪಾಲರ ನಡೆ ವ್ಯತ್ಯಾಸ ಕಾಣಿಸುತ್ತಿದೆಯಾ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಅಲ್ಲಲ್ಲಿ ಅನಾಹುತಗಳಾಗಿವೆ. ಅನ್ನದಾತರ ಬೇಕು, ಬೇಡಗಳ ಕಡೆ ಗಮನ ಹರಿಸುವ ಜವಾಬ್ದಾರಿ ಹೊರಬೇಕಾದ ಸರ್ಕಾರ ಬೀದಿಗಿಳಿಯುತ್ತಿರುವುದು ದುರದೃಷ್ಟಕರ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಕ್ತಾರ ದಗ್ಗೆ ಶಿವಪ್ರಕಾಶ್, ಶಿವಣ್ಣಚಾರ್, ತಿಪ್ಪೇಸ್ವಾಮಿ ಛಲವಾದಿ, ಭಾರ್ಗವಿ ದ್ರಾವಿಡ್ ಇದ್ದರು.

----------------

ಪೋಟೋ ಕ್ಯಾಪ್ಸನ

ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಭಾನುವಾರ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

--------

ಫೋಟೋ ಪೈಲ್ ನೇಮ್- 18ಸಿಟಿಡಿ7