ಇಂದು ಎಲ್ಲೆಡೆ ಮೊಬೈಲ್‌ ಮೇನಿಯಾ ಹೆಚ್ಚುತ್ತಿದೆ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೊಬೈಲ್‌ ಬಿಟ್ಟು ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಬೆರೆಯುವುದು ಅಗತ್ಯವಿದೆ.

ಹುಬ್ಬಳ್ಳಿ:

ಇಂದು ಎಲ್ಲೆಡೆ ಮೊಬೈಲ್‌ ಮೇನಿಯಾ ಹೆಚ್ಚುತ್ತಿದೆ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೊಬೈಲ್‌ ಬಿಟ್ಟು ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಬೆರೆಯುವುದು ಅಗತ್ಯವಿದೆ ಎಂದು ಉದ್ಯಮಿ ವಾಣಿ ಆನಂದ ಸಂಕೇಶ್ವರ ಅವರು ಪಾಲಕರಿಗೆ ಕಿವಿಮಾತು ಹೇಳಿದರು.

ಕೇಶ್ವಾಪುರದ ವೃಕ್ಷ ಪ್ರೀಪ್ರೈಮರಿ ಸ್ಕೂಲಿನ 2ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವೃಕ್ಷ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಬೆಳೆದು ನಿಂತಿದೆ. ಇದಕ್ಕೆಲ್ಲ ಕಾರಣ ವೃಕ್ಷ ತಂಡದ ಪರಿಶ್ರಮ ಅಪಾರವಿದೆ. ಇಲ್ಲಿನ ಮಕ್ಕಳು ಮತ್ತು ಪಾಲಕರು ಕೂಡ ವಿಶೇಷವಾಗಿದ್ದಾರೆ. ಹಾಗಾಗಿ ಸಂಸ್ಥೆ ಉತ್ತರ ರೀತಿಯಿಂದ ನಡೆಯುತ್ತಿದೆ ಎಂದು ಮುಕ್ತವಾಗಿ ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ ಅವರು, ಹಲವೆಡೆ ಸನ್ಮಾನ ಸ್ವೀಕರಿಸಿದ್ದೇನೆ.

ಆದರೆ ಈ ಮಕ್ಕಳ ಮಧ್ಯದ ಸನ್ಮಾನ ಎದೆ ತುಂಬಿ ಬರುವಂತೆ ಮಾಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಉಪಾಧ್ಯಕ್ಷೆ ಅಕ್ಷತಾ ಗದ್ದಗಿಮಠ, ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸುತ್ತ, ಇದನ್ನೊಂದು ಮಾದರಿ ಶಾಲೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಚೇರಮನ್‌ ಶಿವಯೋಗಿ ಗದ್ದಗಿಮಠ, ನಿರ್ದೇಶಕಿ ಗೀತಾ ಗದ್ದಗಿಮಠ, ಜಗದೀಶ ಅಟವಿಮಠ, ಬಸವರಾಜ ಗದ್ದಗಿಮಠ, ಮಣಿಕಂಠ ಗದ್ದಗಿಮಠ, ಪ್ರಾಚಾರ್ಯೆ ವೀಣಾ ಹಿರೇಮಠ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಳಿಕ ಮಕ್ಕಳಿಂದ ನೃತ್ಯ, ಹಾಡು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಅಪಾರ ಸಂಖ್ಯೆಯ ಪಾಲಕರು ಭಾಗವಹಿಸಿದ್ದರು.

ರಾಘವ ಹೂಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.